

ಮಾಯಕೊಂಡ: ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಶನಿವಾರ ದಾವಣಗೆರೆ ತಾಲೂಕು ಆನಗೋಡು ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆನಗೋಡು ಹೋಬಳಿಯ ಕಂದನಕೋವಿ, ಮೂಡೇನಳ್ಳಿ, ಪವಾಡರಂಗವ್ವನಹಳ್ಳಿ, ರುದ್ರನಕಟ್ಟೆ ಗ್ರಾಮಗಳಿಗೆ ಮತ್ತು ಜಮೀನುಗಳಲ್ಲಿನ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಸಿಬ್ಬಂದಿಯನ್ನು ಹೊರ ಹಾಕಿ ಕಚೇರಿಗೆ ಬೀಗ ಹಾಕಿದರು.
ಆನಗೋಡು ವಿದ್ಯುತ್ ಸ್ಟೇಷನ್ ವ್ಯಾಪ್ತಿಯ ಫೀಡರ್ಗಳಲ್ಲಿ ಪಂಪ್ಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಲೈನ್ ಚಾರ್ಜ್ ಮಾಡಿದ ನಂತರ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ರಾತ್ರಿ ಸಮಯದಲ್ಲೂ ವಿದ್ಯುತ್ ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್. ತೀರ್ಥೇಶ್ ಮಾತನಾಡಿ, ಪ್ರತಿ ವರ್ಷ ಅಡಕೆ ಸಸಿ ನಾಟಿ ಪ್ರದೇಶ ವಿಸ್ತೀರ್ಣಗೊಳ್ಳುತ್ತಿದೆ. ಈ ಬಾರಿಯೂ ಹೋಬಳಿಯಲ್ಲಿ ಅತಿ ಹೆಚ್ಚು ಅಡಕೆ ಸಸಿ ನಾಟಿ ಆಗಿರುವುದರಿಂದ ವಿದ್ಯುತ್ ಪೂರೈಕೆಗೆ ಓವರ್ ಲೋಡ್ ಆಗಿ ಲೈನ್ ಟ್ರಬಲ್ ಆಗುತ್ತಿದೆ. ಸದ್ಯದಲ್ಲೇ ಹೋಬಳಿಯ ಗುಡಾಳು, ಹೊಸಳ್ಳಿ ಬಳಿ ನೂತನ ಬೆಸ್ಕಾಂ ಸ್ಟೇಷನ್ ಚಾಲನೆಗೊಳ್ಳಲಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬೆಸ್ಕಾಂ ಶಾಖಾಧಿಕಾರಿ ಜಯ್ಯಪ್ಪ, ಕಂದನಕೋವಿ ರುದ್ರಪ್ಪ, ಹನುಮಂತಪ್ಪ, ತಿರುಮಲ, ಕಾಶೀನಾಥ್, ಕೆಂಚವೀರಪ್ಪ, ಮೂಡೇನಹಳ್ಳಿ ಮೂಗಪ್ಪ, ಗುರುಬಸಪ್ಪ, ಕುಮಾರಪ್ಪ, ನಾಗರಾಜ್, ರುದ್ರನಕಟ್ಟೆ ಪರಮೇಶ್ವರಪ್ಪ, ಪವಾಡ ರಂಗವನಹಳ್ಳಿ ರುದ್ರೇಶ್, ಸಂತೋಷ್ ಸೇರಿ ನೂರಾರು ರೈತರು ಇದ್ದರು.