

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಮನುಷ್ಯನ ಜೀವನದಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಬಹುಮುಖ್ಯ ಶಕ್ತಿಗಳು. ಉತ್ತಮ ಸಂಸ್ಕಾರದ ಜತೆಗೆ ಸಮರ್ಪಕ ಶಿಕ್ಷಣ ದೊರಕಿದಾಗ ಮನುಷ್ಯ ಬುದ್ದಿ, ಗುಣಗಳಲ್ಲಿ ಪರಿಪೂರ್ಣನಾಗುತ್ತಾನೆ. ಶಿಕ್ಷಣ ಬದುಕಿನ ದಾರಿ ತೋರಿದರೆ, ಸಂಸ್ಕಾರ ಉತ್ತಮ ಮನುಷ್ಯನ ಪಥ ದರ್ಶನ ಮಾಡುತ್ತದೆ ಎಂದು ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.
ಬಿ.ಕಾಂ ಪರೀಕ್ಷೆಯಲ್ಲಿ 8ನೇ ರ‌್ಯಾಂಕ್ ಪಡೆದ ಎಸ್‌ವಿಟಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ ನಾಯಕ್ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ 6ನೇ ರ‌್ಯಾಂಕ್ ಪಡೆದ ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ವಿದ್ಯಾರ್ಥಿನಿ ಅನ್ವಿ ಪಿ.ಜೈನ್ ಅವರನ್ನು ಅಮಿತ್ ಎಸ್.ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರದಲ್ಲಿ ಸನ್ಮಾನಿಸಿ ಮಾತನಾಡಿದರು.
ಕಾರ್ಕಳ ಪುರಸಭೆ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್.ದೇವರಾಯ ಪ್ರಭು, ಮಂದಿರದ ಪ್ರವರ್ತಕ ಶ್ರೀನಿವಾಸ ಜಿ.ಕೆ.ಪೈ ಮತ್ತು ನಿರ್ಮಲಾ ಪೈ ಉಪಸ್ಥಿತರಿದ್ದರು. ಸುಜಾತಾ ಶೆಟ್ಟಿ ಸ್ವಾಗತಿಸಿ, ಸುನೀತಾ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಾ ಹೆಗ್ಡೆ ವಂದಿಸಿದರು.