ಸಮರ್ಪಕ ಬಸ್ ಸಂಚಾರಕ್ಕಾಗಿ ನಾಲ್ಕು ತಾಸು ಸಂಚಾರ ತಡೆದ ಸ್ಟೂಡೆಂಟ್ಸ್

Kanakagiri Students Protest for Bus
ಕನಕಗಿರಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Published on

ಕನಕಗಿರಿ: ಸಮರ್ಪಕ ಬಸ್ ಸಂಚಾರಕ್ಕಾಗಿ ಆಗ್ರಹಿಸಿ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ನಾಲ್ಕು ತಾಸಿಗೂ ಹೆಚ್ಚು ಕಾಲ ಬಸ್ ಸಂಚಾರ ತಡೆದು ಪ್ರತಿಭಟಿಸಿದರು.

ತಾಲೂಕು ಕೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವಕ್ಷೇತ್ರದಲ್ಲೇ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲವಾಗಿವೆ. ಸಮಸ್ಯೆ ಹಲವು ದಿನಗಳಿಂದ ಇದ್ದು, ಈ ಹಿಂದೆ ಪ್ರತಿಭಟನೆ ನಡೆಸಿ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಶಕ್ತಿ ಯೋಜನೆಯ ಜಾರಿ ಬಳಿಕ ಮಹಿಳೆಯರ ಸಂಚಾರ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ತಲೆಬಿಸಿಯಾಗಿದೆ. ಪ್ರತಿನಿತ್ಯ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಗಂಗಾವತಿ, ಕೊಪ್ಪಳಕ್ಕೆ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ ಸಮರ್ಪಕವಾಗಿ ಬಸ್ ಇಲ್ಲವಾಗಿವೆ.

ಬಸ್ ಇದ್ದರೂ ಫುಲ್ ರಶ್ ಇರುತ್ತದೆ. ವಿದ್ಯಾರ್ಥಿಗಳಿದ್ದರೆ, ಕೆಲ ಬಸ್ ಚಾಲಕರು ನಿಲುಗಡೆ ಕೊಡುವುದಿಲ್ಲ. ಸಾರಿಗೆ ಸಂಸ್ಥೆ ಪಾಸ್ ವಿತರಿಸಿದೆ. ಆದರೆ, ಬಸ್‌ಗಳೇ ಇಲ್ಲದಿದ್ದರೆ ಸಂಚರಿಸುವುದಾದರೂ ಹೇಗೆ ಎಂದು ಅಧಿಕಾರಿಗಳ ವರ್ತನೆಯನ್ನು ಉಪನ್ಯಾಸಕರು ಖಂಡಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಷಯ ಸಚಿವರ ಗಮನಕ್ಕೂ ಬಂದಿದ್ದು, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆಂದು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರೂ ಸಫಲರಾಗಲಿಲ್ಲ. ಸಮಯವಾದಂತೆಲ್ಲ ಪಟ್ಟಣದ ಮೂಲಕ ಹಾದು ಹೋಗುವ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು ಬೃಹತ್ ಮಟ್ಟದಲ್ಲಿ ಪ್ರತಿಭಟನೆಗಿಳಿದರು.

ಇದಕ್ಕೆ ಸ್ಥಳೀಯರ ಬೆಂಬಲವೂ ದೊರೆತಿದ್ದರಿಂದ ಪ್ರತಿಭಟನೆ ಕಾವು ಜೋರಾಯಿತು. ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬಂದು ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.

ಸಹಾಯಕ ಡಿಪೋ ಮ್ಯಾನೇಜರ್ ಪರಶುರಾಮ ಆಗಮಿಸಿ, ಬಸ್ ಬಿಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕ, ಎಎಸ್‌ಐ ಜಾಫರ್ ಷರೀಫ್, ಸಿಬ್ಬಂದಿ ಮುತ್ತಣ್ಣ, ರಮೇಶ ಚೌಡ್ಕಿ, ಕೊಟ್ರೇಶ್, ವಿದ್ಯಾರ್ಥಿಗಳಾದ ಕನಕಾಚಲ, ಕಿರಣ್, ರಾಘವೇಂದ್ರ, ಮಲ್ಲಿಕಾರ್ಜುನ, ಗೆದ್ದಪ್ಪ, ನೀಲಕಂಠ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net