ಅಡ್ಡೂರು ಸೇತುವೆ ಧಾರಣಾ ಸಾಮರ್ಥ್ಯ ಪರೀಕ್ಷೆ

22-bridge
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಶಿಥಿಲಗೊಂಡಿದೆ ಎನ್ನಲಾದ ಪೊಳಲಿ- ಅಡ್ಡೂರು ಹಳೇ ಸೇತುವೆ ಧಾರಣಾ ಸಾಮರ್ಥ್ಯ ಪರೀಕ್ಷಿಸಲು ಸೋಮವಾರ ಪೊಳಲಿಗೆ ಆಗಮಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ‘ಸೇತುವೆ ತಪಾಸಣಾ ವಾಹನ’ ತಪಾಸಣೆ ಆರಂಭಿಸಿದೆ.

ಪಿಡಬ್ಲ್ಯುಡಿ ಕಾರ್ಯನಿರ್ವಹಣಾ ಇಂಜಿನಿಯರ್ ಅಮರ್‌ನಾಥ್ ಮಾಹಿತಿ ನೀಡಿ, ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಮತ್ತು ಸಿಬ್ಬಂದಿ ವರ್ಗ ವಿಶೇಷ ವಾಹನ ಬಳಸಿಕೊಂಡು ಸೇತುವೆ ಪಿಲ್ಲರ್‌ಗಳು ಮತ್ತು ಗರ್ಡರ್‌ಗಳ ಧಾರಣಾ ಸಾಮರ್ಥ್ಯ ದಾಖಲಿಸಿಕೊಳ್ಳಲಿದ್ದಾರೆ. ಸೇತುವೆಯ ಪ್ರಸಕ್ತ ಸ್ಥಿತಿಗತಿ ಬಗ್ಗೆ ಬೆಂಗಳೂರು ಕಚೇರಿಯಲ್ಲಿ ವರದಿ ಸಿದ್ಧಪಡಿಸಿ ಮಂಗಳೂರು ಕಚೇರಿಗೆ ಕಳುಹಿಸಲಾಗುವುದು. ಇದಕ್ಕೆ ಒಂದರೆಡು ದಿನ ಬೇಕಾಗುತ್ತದೆ. ಮಂಗಳೂರು ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ. ಸೇತುವೆಯ ಪರೀಕ್ಷೆ ಪೂರ್ಣಗೊಳ್ಳದೆ ಈಗಲೇ ಏನೂ ಹೇಳುವಂತಿಲ್ಲ ಎಂದರು.

ಪ್ರಸಕ್ತ ಘನ ವಾಹನ ಸಂಚಾರ ನಿಷೇಧಿಸಲಾದ ಪೊಳಲಿ- ಅಡ್ಡೂರು ಸೇತುವೆಗೆ ವಿಶೇಷ ವಾಹನ ಆಗಮಿಸುತ್ತಲೇ ಭಾರಿ ಸಂಖ್ಯೆಯಲ್ಲಿ ಕುತೂಹಲಿಗರು ಜಮಾಯಿಸಿದ್ದಾರೆ. ಸೇತುವೆಯಲ್ಲಿ ಶಾಲಾ ಬಸ್‌ಗಳು ಮತ್ತು ಪ್ರಯಾಣಿಕರ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡಬಹುದು. ಬಸ್ ಸಂಚಾರ ನಿಷೇಧಿಸುವಷ್ಟು ಸೇತುವೆ ಶಿಥಿಲಗೊಂಡಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net