

ಮೈಸೂರು: ವಿಶ್ವದರ್ಜೆಯ ಆವಿಷ್ಕಾರ ಮಾಡುವ ಸಾಮರ್ಥ್ಯ ಇರುವ ಭಾರತೀಯ ವಿಜ್ಞಾನಿಗಳು ಜೀವ ವೈವಿಧ್ಯತೆ ವಿಷಯಗಳತ್ತ ಮುಖಮಾಡಬೇಕು ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ಪ್ರೊ.ವೆಂಕಿ ರಾಮಕೃಷ್ಣನ್ ಹೇಳಿದರು.
ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ಸ್- 2015ನಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರೇ ರಚಿಸಿರುವ ‘ವೈ ವಿ ಡೈ’ ಕೃತಿ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿಭಾವಂತ ವಿಜ್ಞಾನಿಗಳಿದ್ದಾರೆ. ಆದರೆ ಸಂಶೋಧನೆಯಲ್ಲಿ ಸ್ವಂತ ಪ್ರತಿಭೆಯನ್ನು ಹೆಚ್ಚು ಅನಾವರಣಗೊಳಿಸುತ್ತಿಲ್ಲ. ಹಳೆ ವಿಷಯಗಳ ಸುತ್ತಲೇ ಸುತ್ತುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನಿಗಳು ವಿಶ್ವದರ್ಜೆಯ ಆವಿಷ್ಕಾರ ಮಾಡುವ ಸಾಮರ್ಥ್ಯ ಇರುವವರು. ಜೀವವೈವಿಧ್ಯ, ಪ್ರಾಣಿಗಳ ವರ್ತನೆ ಹಾಗೂ ಪರಿಸರ ವಿಷಯಗಳತ್ತ ಮುಖ ಮಾಡಬೇಕು. ಇದರಿಂದ ಹೊಸ ಸಂಶೋಧನೆಗಳು ಆವಿಷ್ಕಾರಗೊಳ್ಳಲಿವೆ ಎಂದು ಹೇಳಿದರು.
ವಿಕಾಸವಾದವು ವ್ಯಕ್ತಿಯ ಸಾಮರ್ಥ್ಯ, ಫಿಟ್‌ನೆಸ್ ಅನ್ನು ಆಧರಿಸಿರುತ್ತದೆ. ಆಯುಷ್ಯವನ್ನು ಪ್ರೋಟಿನ್‌ಗಳು ನಿರ್ಧರಿಸುತ್ತವೆ. ಸರಿಯಾದ ಸಮಯ ಹಾಗೂ ಪ್ರಮಾಣದಲ್ಲಿ ಪ್ರೋಟಿನ್ ಉತ್ಪಾದಿಸುವ ಹಾಗೂ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ದೇಹಕ್ಕೆ ಇರುವವರೆಗೂ ಬದುಕಿರುತ್ತೇವೆ ಎಂದರು.
ಚಿಕಿತ್ಸೆ ಮೂಲಕ ರೋಗಗಳನ್ನು ತಪ್ಪಿಸಬಹುದು. ಅದರೆ ವಯಸ್ಸಾಗುವುದನ್ನು ಹಾಗೂ ಸಾವನ್ನು ತಡೆಯಲಾಗದು. ನಾವು ಇಲ್ಲಿ ಸುಮ್ಮನೆ ಕುಳಿತಿದ್ದರೂ ನಮ್ಮೊಳಗಿನ ಸಾವಿರಾರು ಜೀವಕೋಶಗಳು ಸಾಯುತ್ತಲೇ ಇರುತ್ತವೆ. ನಾವು ಸತ್ತರೂ ಬಹುತೇಕ ಜೀವಕೋಶಗಳು ಜೀವಂತವಾಗಿ ಇರುತ್ತವೆ. ಮೂತ್ರಪಿಂಡ, ಹೃದಯ, ಯಕೃತ್ ಸೇರಿದಂತೆ ಬೇರೆಯವರಿಗೆ ಅಂಗಾಂಗ ದಾನ ಮಾಡಲು ಸಾಧ್ಯ ಎಂದು ಹೇಳಿದರು.
ಲೇಖಕ ಪ್ರೊ.ಸಿ.ನಾಗಣ್ಣ, ವಿಜ್ಞಾನಿ ಪ್ರೊ.ಮೇವಾ ಸಿಂಗ್ ಸಂವಾದ ನಡೆಸಿಕೊಟ್ಟರು.