

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೆ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಔಷಧ ಸಿಂಪಡಣೆ ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದೆಲ್ಲೆಡೆ ನಿಯಮಿತವಾಗಿ ಎಲ್ಲೆಡೆ ಔಷಧ ಸಿಂಪಡಣೆಗಾಗಿ 530 ಸ್ಪ್ರೇಯರ್‌ಗಳಿವೆ. 500 ಮಂದಿ ವಿವಿಧೆಡೆ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ. ಹೆಚ್ಚುವರಿಯಾಗಿ 30 ಸ್ಪೇಯರ್‌ಗಳನ್ನು ಖರೀದಿಸಲು ಟೆಂಡರ್ ನೀಡಲಾಗಿದೆ ಎಂದರು.
ಸರಾಸರಿ 200 ಪ್ರಕರಣ ಪತ್ತೆ:
ನಗರದಲ್ಲಿ ನಿತ್ಯ ಸರಾಸರಿ 200 ಡೆಂಘೆ ಪ್ರಕರಣಗಳು ಕಂಡುಬರುತ್ತಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 30 ಸಕ್ರಿಯ ಹಾಟ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ರೋಗಿಗಳ ಸಂಖ್ಯೆ ಆಧರಿಸಿ ಈ ಸಂಖ್ಯೆ ನಿತ್ಯವೂ ಬದಲಾಗುತ್ತಾ ಹೋಗುತ್ತದೆ. ಹಾಗಾಗಿ ಹಾಟ್ ಸ್ಪಾಟ್‌ಗಳ ಸಂಖ್ಯೆಯೂ ಬದಲಾಗುತ್ತಿದ್ದು, ಎಲ್ಲೆಡೆ ನೀಗಾ ಇಡುವಂತೆ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೊಳಗೇರಿ ಹಾಗೂ ಬಡ ವರ್ಗದ ಪ್ರದೇಶದಲ್ಲಿ ನೀಮ್ ಆಯಿಲ್ ಹಾಗೂ ಡೀಟ್ ಕ್ರೀಮ್ ಅನ್ನು ಹಂಚಿಕೆ ಮಾಡಲಾಗುತ್ತಿದೆ. ಡೆಂಘೆ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಹೆಚ್ಚಾಗಿ ಫಾಗಿಂಗ್, ಔಷಧಿ ಸಿಂಪಡಣೆ ಮಾಡಬೇಕು. ಜತೆಗೆ ಹಾಟ್ ಸ್ಪಾಟ್ ಸ್ಥಳಗಳಲ್ಲಿ ಡೆಂಘೆ ನಿಯಂತ್ರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.