

ಮದ್ದೂರು: ಮದ್ದೂರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ತಿಂಗಳ ಹಿಂದೆ ತಾಲೂಕಿಗೆ ಹೆಚ್ಚುವರಿಯಾಗಿ 350 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರಕ್ಕೆ ಮುಖ್ಯಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಸಚಿವರುಗಳು 1350 ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ಅದರಂತೆಯೇ ಕಳೆದ ತಿಂಗಳು ಹೆಚ್ಚುವರಿಯಾಗಿ ಸರ್ಕಾರ 350 ಕೋಟಿ ರೂ.ಗಳನ್ನು ಮತ್ತೊಮ್ಮೆ ಬಿಡುಗಡೆಗೊಳಿಸಿದೆ ಎಂದರು.
ಬೆಸಗರಹಳ್ಳಿ ಗ್ರಾಪಂ ವ್ಯಾಪ್ತಿಯ ಪಣ್ಣೆದೊಡ್ಡಿ ಗ್ರಾಮದ ರಸ್ತೆ, ಚರಂಡಿ ಇನ್ನಿತರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಗ್ರಾಮವೊಂದಕ್ಕೆ 3 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ದೊರೆತಿದೆ. ಜತೆಗೆ ನಾಲೆಗಳ ಆಧುನೀಕರಣ, ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರೈಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಿ ಮಾದರಿ ಗ್ರಾಮವನ್ನಾಗಿಸಲು ಪಣ ತೊಟ್ಟಿದ್ದೇನೆ ಎಂದರು.
ಕಳೆದ ಎರಡೂವರೆ ವರ್ಷದಲ್ಲಿ ಮದ್ದೂರು ಕ್ಷೇತ್ರವೊಂದಕ್ಕೆ 1800 ಕೋಟಿರೂ. ಅನುದಾನವನ್ನು ಬಿಡುಗಡೆಗೊಳಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಇತಿಶ್ರೀ ಹಾಡುವ ಜತೆಗೆ ವಾರಕ್ಕೊಂದು ದಿನ ತಾಲೂಕು ಆಡಳಿತವನ್ನೇ ಗ್ರಾಮದತ್ತ ಕೊಂಡೊಯ್ಯಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಶಬೀನಾ ತಾಜ್, ಸದಸ್ಯರಾದ ಮುರುಳಿ, ಶೋಭಾ, ಮೂರ್ತಿ, ಮಂಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ರಾಜೀವ್, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮುಖಂಡರಾದ ಬೆಸಗರಹಳ್ಳಿ ಗೋಪಿ, ಜಾವಿದ್, ಚಿಕ್ಕತಿಮ್ಮೇಗೌಡ, ರಾಧಾಕೃಷ್ಣ, ಪ್ರಕಾಶ್, ಗೋವಿಂದು, ಪಣ್ಣೆದೊಡ್ಡಿ ಸುಧಾಕರ್, ಧನಂಜಯ ಇತರರು ಇದ್ದರು.