ಸರ್ಕಾರಿ ಶಾಲೆಗಳಿಗೆ ಅತಿಥಿಗಳೇ ಗತಿ, ಹೆಚ್ಚುವರಿ ಕರ್ತವ್ಯದಿಂದ ರೋಸಿಹೋದ ಕಾಯಂ ಶಿಕ್ಷಕರು

SCHOOL
ಗಂಗಾವತಿ ಜಯನಗರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ 1ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಒಂದೇ ಕೊಠಡಿಯಲ್ಲಿರಿಸಿರುವುದು.
Published on

ವೀರಾಪುರ ಕೃಷ್ಣ ಗಂಗಾವತಿ
ಶಿಕ್ಷಕರ ಕೊರತೆಯಿಂದ ನಲುಗುತ್ತಿರುವ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರೇ ನೆರವಾಗಿದ್ದು, ಬೋಧನೆ ಹೊರತು ಹೆಚ್ಚುವರಿ ಕೆಲಸಗಳಿಂದ ಕಾಯಂ ಶಿಕ್ಷಕರು ರೋಸಿಹೋಗಿದ್ದಾರೆ.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ 311 ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿದ್ದು, 30 ಏಕೋಪಾಧ್ಯಾಯ ಶಾಲೆಗಳಿವೆ. 20 ವರ್ಷಗಳ ಹಿಂದೆ ಎಲ್ಲೆಂದರಲ್ಲಿ ಸರ್ಕಾರಿ ಶಾಲೆಗಳನ್ನು ಆರಂಭಿಸಿದ್ದು, ಸರ್ವಶಿಕ್ಷ ಅಭಿಯಾನದಡಿ ಕಟ್ಟಡ ಒದಗಿಸಲಾಗಿದೆ.

ಶಿಕ್ಷಕರು ಮತ್ತು ನಿರ್ವಹಣೆ ಕೊರತೆಯಿಂದ ಬಹುತೇಕ ಶಾಲೆಗಳಲ್ಲಿ ಮಕ್ಕಳಿಲ್ಲ. ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿದ್ದರೂ, ಕಲಿಸುವ ಆಸಕ್ತಿ ಪಾಲಕರಿಲ್ಲ. ಬಾಪಿರೆಡ್ಡಿ ಕ್ಯಾಂಪ್‌ನಲ್ಲಿದ್ದ ತೆಲುಗು ಮಾಧ್ಯಮ ಶಾಲೆ ಸಂಪೂರ್ಣ ಕನ್ನಡೀಕರಣವಾಗಿದೆ. ಕನ್ನಡ ಶಾಲೆಗಳಲ್ಲಿನ ಕೊರತೆ ಅರಿತ ಬಹುತೇಕ ಪಾಲಕರು ಖಾಸಗಿ ಶಾಲೆಗಳ ಮೊರೆಹೋಗಿದ್ದು, ಒಂದು ಸರ್ಕಾರಿ ಶಾಲೆಗಳ ಸುತ್ತ 5ಕ್ಕೂ ಹೆಚ್ಚು ಖಾಸಗಿ ಶಾಲೆಗಳು ತಲೆಎತ್ತಿವೆ.

ಭರ್ತಿಯಾಗಿದ್ದು 910 ಹುದ್ದೆ ಮಾತ್ರ

ತ್ರಿವಳಿ ತಾಲೂಕಿಗೆ 1830 ಶಿಕ್ಷಕರ ಹುದ್ದೆ ಮಂಜೂರಾದರೂ, ಭರ್ತಿಯಾಗಿದ್ದು 910 ಮಾತ್ರ. ಶೇ40 ಶಿಕ್ಷಕರು ಅನ್ಯ ಜಿಲ್ಲೆಗಳಿಂದ ಬಂದವರಾಗಿದ್ದರಿಂದ ಷರತ್ತು ಅವಧಿ ಮುಗಿಸಿದ 317 ಶಿಕ್ಷಕರು ಕೌನ್ಸೆಲಿಂಗ್ ಮೂಲಕ ತಮ್ಮ ಜಿಲ್ಲೆಗೆ ಮರಳಿದ್ದಾರೆ. 593 ಶಿಕ್ಷಕರ ಪೈಕಿ ಅನಾರೋಗ್ಯ, ಹೆರಿಗೆ ರಜೆ, ತರಬೇತಿ ಮೇಲೆ ಶೇ.20 ಶಿಕ್ಷಕರು ಶಾಲೆಯಿಂದ ಹೊರಗಿದ್ದಾರೆ. ಜೇಷ್ಠತೆ ಆಧಾರದ ಭಡ್ತಿಯ ಮೇಲೆ ಪ್ರಸಕ್ತ ಸಾಲಿನಲ್ಲಿ 30 ಶಿಕ್ಷಕರು ಪ್ರೌಢ ಶಾಲೆಗೆ ತೆರಳಲಿದ್ದಾರೆ. ಹೀಗಾಗಿ ಬಹುತೇಕ ಶಾಲೆಗಳು ಏಕೋಪಾಧ್ಯಾಯ ಹಂತಕ್ಕೆ ತಲುಪಿದ್ದು, ಮುಖ್ಯಶಿಕ್ಷಕರೇ ಎಲ್ಲವನ್ನೂ ನಿಭಾಯಿಸಬೇಕಿದೆ. ಶಿಕ್ಷಕರ ಕೊರತೆ ನೀಗಿಸಲು 771 ಅತಿಥಿ ಶಿಕ್ಷಕರನ್ನು ನಿಯೋಜಿಸಿದರೂ, ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಸಾಲುತ್ತಿಲ್ಲ.

ಅರ್ಜಿ ನಮೂನೆ ಭರ್ತಿಯಲ್ಲೇ ಕಾಲಹರಣ

ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೆಲಸ ನಿರ್ವಹಣೆಯಲ್ಲಿ ಶಿಕ್ಷಕರು ಕಾಲಕಳೆಯುತ್ತಿದ್ದು, ನಮೂನೆ ಭರ್ತಿ ಮಾಡುವಲ್ಲಿ ನಮ್ಮ ಆಯುಷ್ಯ ಕಳೆಯುತ್ತಿದ್ದೇವೆ ಎಂದು ಶಿಕ್ಷಕರು ಗೊಣಗುತ್ತಿದ್ದಾರೆ. ಅಕ್ಷರ ದಾಸೋಹ, ನಲಿಕಲಿ, ಶೌಚಗೃಹ, ಕುಡಿವ ನೀರಿನ ವ್ಯವಸ್ಥೆ, ಸಮವಸ, ಶೂ, ಸಾಕ್ಸ್ ವಿತರಣೆ, ಅಂಗವಿಕಲರ ಮಾಸಾಶನ, ಶಾಲೆ ಬಿಟ್ಟ ಮಕ್ಕಳು, ಲಿತಾಂಶ ಪ್ರಗತಿ ವರದಿ ಭರ್ತಿ ಮಾಡಲು ದಿನವೀಡಿ ಕಳೆಯುತ್ತಿದ್ದು, ದಿನಕ್ಕೊಂದು ಬದಲಾಗುವ ಅರ್ಜಿ ನಮೂನೆ ಭರ್ತಿ ಮಾಡಲೇಬೇಕು. ಆನ್‌ಲೈನ್ ನೋಂದಣಿ ಹಿನ್ನೆಲೆಯಲ್ಲಿ ಶೇ.40 ಹಿರಿಯ ಶಿಕ್ಷಕರಿಗೆ ಕಂಪ್ಯೂಟರ್ ಬಗ್ಗೆ ಗೊತ್ತಿಲ್ಲ. ಖಾಸಗಿ ಆನ್‌ಲೈನ್ ಸಂಸ್ಥೆ ಮೂಲಕ ಭರ್ತಿಮಾಡಬೇಕಿದೆ. ಲಾಗಿನ್ ಪಾಸ್‌ವಾರ್ಡ್ ದುರ್ಬಳಕೆಯಾದರೂ ಶಿಕ್ಷಕರೇ ಹೊಣೆಗಾರರು. ಬಿಸಿಯೂಟ ಸಿಬ್ಬಂದಿ ಕೈಕೊಟ್ಟರೇ ಶಿಕ್ಷಕರೇ ಅಡುಗೆ ಭಟ್ಟರಾಗಬೇಕಿದೆ.

ಈಡೇರದ ಬಹುದಿನದ ಬೇಡಿಕೆ

ಹೆಚ್ಚುವರಿ ಕರ್ತವ್ಯದಿಂದ ರೋಸಿಹೋಗಿರುವ ಬಹುತೇಕ ಶಿಕ್ಷಕರು ರಜೆಯ ಮೇಲೆ ತೆರಳಿರುವ ಉದಾಹರಣೆಗಳಿವೆ. ಕಂಪ್ಯೂಟರ್ ಅಪರೇಟರ್, ಎಸ್‌ಡಿಎ ಮತ್ತು ಡಿ ಗ್ರೂಪ್ ನೌಕರರ ನೇಮಕಕ್ಕಾಗಿ ಶಿಕ್ಷಕರ ಸಂಘ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಕೆಲ ಶಾಲೆಗಳಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆಯಿಂದ ಮಕ್ಕಳ ಭವಿಷ್ಯಕ್ಕಾಗಿ ಕನ್ನಡ ಮತ್ತು ಸಮಾಜ ವಿಜ್ಞಾನ ಶಿಕ್ಷಕರೇ ಎರಡೂ ವಿಷಯ ನಿರ್ವಹಿಸಬೇಕಿದೆ. ಇನ್ನು ಕೆಲ ಶಿಕ್ಷಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ರಿಯಲ್ ಎಸ್ಟೇಟ್ ಮತ್ತು ಇಎಲ್, ಡಿಎಲ್ (ಸಾಲ) ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ಗೊತ್ತಾಗಿದೆ. ಪ್ರಭಾವಿ ಶಿಕ್ಷಕರು, ಹೊಸ ಮತ್ತು ಅತಿಥಿ ಶಿಕ್ಷಕರನ್ನು ಕರ್ತವ್ಯ ನಿರ್ವಹಣೆಗೆ ನಿಯೋಜಿಸಿಕೊಂಡಿರುವುದನ್ನು ಶಿಕ್ಷಕರೇ ಒಪ್ಪಿಕೊಳ್ಳುತ್ತಾರೆ.

ತ್ರಿವಳಿ ತಾಲೂಕಿನಲ್ಲಿ ಶಿಕ್ಷಕರ ಕೊರತೆಯಿದ್ದು, ಕೌನ್ಸೆಲಿಂಗ್ ಮೂಲಕ ಹಲವು ಶಿಕ್ಷಕರು ಜಿಲ್ಲೆಯಿಂದ ಹೊರಗೆ ಹೋಗಿದ್ದಾರೆ. ಅತಿಥಿ ಶಿಕ್ಷಕರ ಮೂಲಕ ಕೊರತೆ ನೀಗಿಸಲಾಗುತ್ತಿದೆ.ವೆಂಕಟೇಶ ರಾಮಚಂದ್ರಪ್ಪ, ಬಿಇಒ, ಗಂಗಾವತಿ ಹೆಚ್ಚುವರಿ ಕರ್ತವ್ಯದಿಂದ ಶಿಕ್ಷಕರಿಗೆ ತೊಂದರೆಯಾಗಿದ್ದು, ಪಾಠಕ್ಕೆ ಅಡ್ಡಿಯಾಗಿದೆ. ಕಂಪ್ಯೂಟರ್, ಎಸ್‌ಡಿಎ ಮತ್ತು ಡಿಗ್ರೂಪ್ ಸಿಬ್ಬಂದಿ ನೇಮಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಬೇಡಿಕೆ ಈಡೇರುತ್ತಿಲ್ಲ.ಚಾಂದ್‌ಪಾಶಾ, ರಾ.ಪ್ರಾ.ಶಾಲೆ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಮುರಹರಿ ನಗರ ಸರ್ಕಾರಿ ಶಾಲೆ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net