

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಫೆಬ್ರವರಿಯಲ್ಲಿ ಅನೇಕ ಮಹಾನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ.1ರಂದು ಮಡಿವಾಳ ಮಾಚಯ್ಯ, 5ರಂದು ಸವಿತಾ ಮಹರ್ಷಿ ಜಯಂತಿಯನ್ನು ಡಿ.ದೇವರಾಜು ಅರಸು ಭವನದಲ್ಲಿ ಆಚರಿಸಲಾಗುವುದು. 10ರಂದು ಕಾಯಕ ಶರಣರ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣ, 15ರಂದು ಸಂತ ಸೇವಾಲಾಲ್ ಜಯಂತಿ, 19ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ 20ರಂದು ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಮಾಡಲಾಗುವುದು. ಸಮುದಾಯದ ಮುಖಂಡರ ಆಶಯದಂತೆ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವಿವಿಧ ಮಹಾನೀಯರ ಜಯಂತಿ ಕಾರ್ಯಕ್ರಮ ಆಯೋಜನೆಗೆ ಸೂಚನೆ ನೀಡಲಾಗುವುದು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಎಲ್.ಸಂದೇಶ್ ಇತರರಿದ್ದರು.