ಮತದಾರರ ಪಟ್ಟಿ ಪ್ರಕಟ ಆಕ್ಷೇಪಣೆ ಸಲ್ಲಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

Additional District Collector Meeting Mandya
Published on

ಮಂಡ್ಯ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2025 ಜ.1ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅ.29ರಂದು ಕರಡು ಮತದಾರರ ಹಾಗೂ ಸೇವಾ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಬುಧವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 272 ಮತಗಟ್ಟೆಗಳಿವೆ. ಪುರುಷ ಮತದಾರರು-1,26,686, ಮಹಿಳೆಯರು-1,28,487, ತೃತೀಯ ಲಿಂಗಿ-10 ಸೇರಿದಂತೆ ಒಟ್ಟು 2,55,183 ಮತದಾರರಿದ್ದಾರೆ. ಮದ್ದೂರಿನಲ್ಲಿ 254 ಮತಗಟ್ಟೆಗಳಿದ್ದು, ಪುರುಷರು-1,04,071, ಮಹಿಳೆಯರು-1,11,727, ತೃತೀಯ ಲಿಂಗಿ-20 ಸೇರಿ 2,15,818 ಮತದಾರರಿದ್ದಾರೆ. ಮೇಲುಕೋಟೆಯಲ್ಲಿ 264 ಮತಗಟ್ಟೆಗಳಿವೆ. ಪುರುಷರು-1,00,535, ಮಹಿಳೆಯರು-1,03,449, ತೃತೀಯ ಲಿಂಗಿ-10 ಸೇರಿ ಒಟ್ಟು 2,03,994 ಮತದಾರರಿದ್ದಾರೆ ಎಂದರು.

ಮಂಡ್ಯ ಕ್ಷೇತ್ರದಲ್ಲಿ 263 ಮತಗಟ್ಟೆಗಳಿವೆ. ಪುರುಷರು-1,12,324, ಮಹಿಳೆಯರು-1,18,580, ತೃತೀಯ ಲಿಂಗಿ-43 ಸೇರಿ 2,30,947 ಮತದಾರರಿದ್ದಾರೆ. ಶ್ರೀರಂಗಪಟ್ಟಣದಲ್ಲಿ 249 ಮತಗಟ್ಟೆಗಳಿದ್ದು, ಪುರುಷರು-1,06,018, ಮಹಿಳೆಯರು-1,11,581, ತೃತೀಯಲಿಂಗಿ-44 ಸೇರಿದಂತೆ ಒಟ್ಟು 2,17,643 ಮತದಾರರಿದ್ದಾರೆ. ನಾಗಮಂಗಲದಲ್ಲಿ 260 ಮತಗಟ್ಟೆಗಳಿದ್ದು, ಪುರುಷರು-1,07,188, ಮಹಿಳೆಯರು-1,08,564, ತೃತೀಯ ಲಿಂಗಿ-10 ಒಟ್ಟು 2,15,762 ಮತದಾರರಿದ್ದಾರೆ. ಕೆ.ಆರ್.ಪೇಟೆಯಲ್ಲಿ 261 ಮತಗಟ್ಟೆಗಳಿದ್ದು, ಪುರುಷರು-1,11,432, ಮಹಿಳೆಯರು-1,12,542, ತೃತೀಯ ಲಿಂಗಿ-10 ಸೇರಿದಂತೆ ಒಟ್ಟು 2,23,984 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,823 ಮತಗಟ್ಟೆಗಳಿದ್ದು, ಪುರುಷರು-7,68,254, ಮಹಿಳೆಯರು-7,94,930, ತೃತೀಯ ಲಿಂಗಿ-147 ಸೇರಿದಂತೆ ಒಟ್ಟು 15,63,331 ಮತದಾರರಿದ್ದಾರೆ ಎಂದು ವಿವರಿಸಿದರು.

ಇನ್ನು ಮಳವಳ್ಳಿ ಕ್ಷೇತ್ರದಲ್ಲಿ ಪುರುಷ-76, ಮಹಿಳೆ-5, ಮದ್ದೂರು ಕ್ಷೇತ್ರದಲ್ಲಿ ಪುರುಷ-140, ಮಹಿಳೆ-2, ಮೇಲುಕೋಟೆಯಲ್ಲಿ ಪುರುಷ-62, ಮಂಡ್ಯದಲ್ಲಿ ಪುರುಷ-116, ಮಹಿಳೆ-5, ಶ್ರೀರಂಗಪಟ್ಟಣ ಪುರುಷ-53, ಮಹಿಳೆ-2, ನಾಗಮಂಗಲ ಪುರುಷ-61, ಮಹಿಳೆ-5, ಕೆ.ಆರ್.ಪೇಟೆಯಲ್ಲಿ ಪುರುಷ-92, ಮಹಿಳೆ-3 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಪುರುಷ-600, ಮಹಿಳೆ-22 ಸೇರಿ 622 ಸೇವಾ ಮತದಾರರಿದ್ದಾರೆ. ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಹೆಸರು ನೋಂದಾಯಿಸಲು ಕ್ರಮವಹಿಸಲಾಗಿದೆ. ಹಾಗೂ ಸ್ವೀಕೃತವಾದ ನಮೂನೆಗಳನ್ನು ನಿಯಮಾನುಸಾರ ನಿಗಧಿತ ಅವಧಿಯಲ್ಲಿ ವಿಲೆವಾರಿಗೊಳಿಸಲಾಗಿರುತ್ತದೆ. ಕರಡು ಮತದಾರರ ಪಟ್ಟಿಯು ಜಿಲ್ಲಾಧಿಕಾರಿ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಎಲ್ಲ ಮತಗಟ್ಟೆಗಳಲ್ಲಿ ಪ್ರಕಟ ಪಡಿಸಲಾಗಿದೆ. ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನ.28ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2025 ಜ.6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಪಡಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಮಂಜುನಾಥ್, ರಮೇಶ್, ಬೊಮ್ಮಯ್ಯ, ಚುನಾವಣಾ ತಹಸೀಲ್ದಾರ್ ರೇಣು ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net