

ಮಂಡ್ಯ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ನೇಮಕಾತಿ ಪರೀಕ್ಷೆ ಡಿ.7 ಹಾಗೂ 8ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ 150 ಹುದ್ದೆ ನೇಮಕಾತಿಗಾಗಿ ಮಂಡ್ಯ ಮತ್ತು ಮದ್ದೂರು ಉಪಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 7ರಂದು ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ಕನ್ನಡ ಭಾಷಾ ಪರೀಕ್ಷೆ ಒಟ್ಟು 14 ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಈ ಪರೀಕ್ಷೆ ಬರೆಯಲು 7,405 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 8ರಂದು ಬೆಳಗ್ಗೆ 10 ರಿಂದ 11.30 ರವರೆಗೆ ಪತ್ರಿಕೆ-1(ಸಾಮಾನ್ಯ ಜ್ಞಾನ) ಹಾಗೂ ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ಪತ್ರಿಕೆ-2(ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ) 20 ಕೇಂದ್ರದಲ್ಲಿ ನಡೆಯಲಿದ್ದು, 10,557 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ. ಅಂತೆಯೇ ಮದ್ದೂರಿನ 6 ಕೇಂದ್ರದಲ್ಲಿ ಪರೀಕ್ಷೆ ಬರೆಯಲು 1,920 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದರು.
ಮಂಡ್ಯ ವಿಶ್ವ ವಿದ್ಯಾನಿಲಯದಲ್ಲಿ ಅಂಗವಿಕಲರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಹಾಗೂ ಪಿಇಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಕೇಂದ್ರಗಳಿಗೆ ಜಾಮರ್ ಮತ್ತು ಸಿಸಿ ಕ್ಯಾಮರಾ ಅಳವಡಿಕೆ, ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಎಚ್ಚರವಹಿಸಿ ನಿಯಮಗಳನ್ನು ಪಾಲಿಸಬೇಕು. ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಡಿಡಿಪಿಯು ಸಿ.ಚೆಲುವಯ್ಯ, ಬಿಇಒಗಳಾದ ಮಹದೇವ, ಕಾಳೀರಯ್ಯ, ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.