ಪುರಾತತ್ವ ಸಂರಕ್ಷಣೆಯಲ್ಲಿ ಭಾರತೀಯರ ಪಾತ್ರ ಪ್ರಮುಖ; ಡಾ.ಅಲೋಕ್ ತ್ರಿಪಾಠಿ

Mythic
Published on

ಬೆಂಗಳೂರು: ಸ್ವತಂತ್ರ ಬಂದು 80 ವರ್ಷ ಸಮೀಪಿಸುತ್ತಿದ್ದರೂ ಭಾರತೀಯರಲ್ಲಿ ಇಂದಿಗೂ ಪುರಾತತ್ವ ಮಹತ್ವದ ಬಗ್ಗೆ ಜಾಗೃತಿ ಸಾಲದು. ಪುರಾತತ್ವ ಸಂರಕ್ಷಣೆಯಲ್ಲಿ ಭಾರತೀಯರ ಪಾತ್ರ ಪ್ರಮುಖವಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಡಾ. ಅಲೋಕ್ ತ್ರಿಪಾಠಿ ಹೇಳಿದ್ದಾರೆ.

ಮಿಥಿಕ್ ಸೊಸೈಟಿಯಲ್ಲಿ ಭಾನುವಾರ ನಡೆದ ಪದ್ಮಶ್ರಿ ಎಸ್.ಸುಬ್ಬರಾಮನ್ ಅವರ ಆತ್ಮಕಥನ ‘ಅಜಂತ ಟು ಅಂಕೋರ ವಾಟ್’ ಇಂಗ್ಲಿಷ್ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪುರಾತತ್ವ ಇತಿಹಾಸಕ್ಕೆ ಸಂಬಂಧಿಸಿದಂತೆ ನಾವು ಇಂದಿಗೂ ಸಹ ಕೇವಲ ಬ್ರಿಟಿಷ್ ತಂತ್ರಜ್ಞರನ್ನು ಮಾತ್ರ ನೆನೆಸಿಕೊಳ್ಳುತ್ತೇವೆ. ಭಾರತದ ಅನೇಕ ಮಹನೀಯರು ಪುರಾತತ್ವ ಇತಿಹಾಸ, ಪರಂಪರೆಯ ಸಂರಕ್ಷಣೆಗಾಗಿ ದುಡಿದವರಿದ್ದಾರೆ. ಆದರೆ ಅವರಿಗೆ ಆ ಕ್ರೆಡಿಟ್ ಕೊಡುವುದಕ್ಕೆ ಹಿಂದೇಟು ಹಾಕುತ್ತಿದ್ದೇವೆ. ಆ ನಿಟ್ಟಿನಲ್ಲಿ ಸುಬ್ಬರಾಮನ್ ಕೂಡ ಪ್ರಾತಃ ಸ್ಮರಣೀಯರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ತಾಂತ್ರಿಕ ವಿಭಾಗದಲ್ಲಿ ರಸಾಯನಶಾಸ್ತ್ರ ವಿಭಾಗದ ಪುರಾತತ್ವ ಅಧೀಕ್ಷಕರಾಗಿದ್ದ ಸುಬ್ಬರಾಮನ್ ಕೊಡುಗೆ ಅದ್ವಿತೀಯವಾದುದು.

ಜಗತ್ಪ್ರಸಿದ್ಧವಾದ ಭಾರತೀಯ ಐತಿಹಾಸಿಕ ತಾಣಗಳಾದ ಅಜಂತ, ಎಲ್ಲೋರ, ಲೇಪಾಕ್ಷಿ, ತಂಜಾವೂರಿನ ಬೃಹದೀಶ್ವರ ದೇವಾಲಯ ಮತ್ತು ಗೋವಾದಲ್ಲಿಯ ಚರ್ಚ್‌ಗಳಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಜೊತೆಗೆ ಅಪ್ಘಾನಿಸ್ಥಾನದ ಬಾಮಿಯಾನ್ ಬುದ್ಧ ವಿಗ್ರಹಗಳು ಮತ್ತು ಕಾಂಬೋಡಿಯಾದ ಅಂಕೋರ್ ವಾಟ್ ದೇವಸ್ಥಾನ ಮುಂತಾದವುಗಳ ಸರ್ವೇಕ್ಷಣ ಮತ್ತು ಸಂರಕ್ಷಣ ಕಾರ್ಯದಲ್ಲಿ ಸುಬ್ಬರಾಮನ್ ಪಾತ್ರ ಪ್ರಮುಖವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಸುದೀರ್ಘವಾದ ಇತಿಹಾಸವನ್ನು ಹೊಂದಿದ್ದು ನಮ್ಮ ಪ್ರಾಚೀನ ಪರಂಪರೆಯ ಸಂರಕ್ಷಣೆಯಲ್ಲಿ ನಿರಂತರವಾಗಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಾಚೀನ ಸ್ಮಾರಕಗಳ ವೈಜ್ಞಾನಿಕ ಸಂರಕ್ಷಣೆಯ ಕಾರ್ಯ ಅತಿ ಪ್ರಮುಖವಾದದ್ದು ಎಂದು ಡಾ.ತ್ರಿಪಾಠಿ ವಿವರಿಸಿದರು.

ಕಾರ್ಯಕ್ರಮದಲ್ಲಿ ವಡೋದರಾದ ಮಹಾರಾಜ ಸಯ್ಯಜಿರಾವ್ ಬರೋಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ಕೃಷ್ಣನ್ ಪುಸ್ತಕ ಪರಿಚಯ ಮಾಡಿಕೊಟ್ಟರು. ಗ್ರಂಥಕರ್ತೃ ಪದ್ಮಶ್ರೀ ಎಸ್.ಸುಬ್ಬರಾಮನ್, ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಕಾರ್ಯದರ್ಶಿ ಎಸ್.ರವಿ, ಎಂ.ಆರ್. ಪ್ರಸನ್ನಕುಮಾರ್ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಡಾ. ಸುಧಾಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net