

ಕಾರವಾರ: ಉತ್ತರ ಕನ್ನಡ ನೂತನ ಅಪರ ಜಿಲ್ಲಾಧಿಕಾರಿ(Additional DC )ಯಾಗಿ ಸಾಜಿದ್ ಅಹಮದ್ ಮುಲ್ಲಾ ಅವರು ಕೊನೆಗೂ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲೆಯ ಇಬ್ಬರು ಪ್ರಭಾವಿ ಕಾಂಗ್ರೆಸ್ ಜನಪ್ರತಿನಿಧಿಗಳ ನಡುವಿನ ಒಳಜಗಳದಲ್ಲಿ ಎಡಿಸಿ ಪದಗ್ರಹಣಕ್ಕೆ ಅಡಚಣೆಯಾಗಿತ್ತು ಎಂಬ ಸುದ್ದಿ ಜಿಲ್ಲಾಧಿಕಾರಿ ಕಚೇರಿಯ ಪಡಸಾಲೆಯಲ್ಲಿ ಹರಿದಾಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಅಕ್ಟೋಬರ್ 1 ರಂದು ವರ್ಗಾವಣೆಯ ಆದೇಶ ಹೊರ ಬಿದ್ದಿದ್ದರೂ 25 ದಿನಗಳವರೆಗೂ ಅಕ್ಬರ್ ಮುಲ್ಲಾ ಹುದ್ದೆಗೆ ಹಾಜರಾಗಿರಲಿಲ್ಲ. ಇದರಿಂದ ಕಾರವಾರ ಎಸಿ ಕನಿಷ್ಕ ಅವರನ್ನು ಹುದ್ದೆಗೆ ಪ್ರಭಾರಿಯಾಗಿ ನೇಮಿಸಲಾಗಿತ್ತು. ಸೋಮವಾರ ಸಾಜಿಸ್ ಅವರು ಅಧಿಕಾರ ಸ್ವೀಕರಿಸಿ ತಕ್ಷಣ ಕಚೇರಿಯ ಸಿಬ್ಬಂದಿ ಸಭೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸ್ಪಷ್ಟನೆ ನೀಡಿ, ವದಂತಿಗಳಿಗೆ ತೆರೆ ಎಳೆದರು. `ವೈಯಕ್ತಿಕ ಕಾರಣಗಳಿಗಾಗಿ ನಾನು ಹುದ್ದೆಗೆ ಹಾಜರಾಗಿರಲಿಲ್ಲ.'ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯನಿರ್ವಹಿಸಿದ ಅನುಭವ ಇದ್ದು, ಆ ಆಧಾರದ ಮೇಲೆ ಮುಂದೆಯೂ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸುವ ವಿಶ್ವಾಸವಿದೆ' ಎಂದರು.
ಇದುವರೆಗೆ ಬಾಗಲಕೋಟೆ ಜಮಖಂಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿಯಾಗಿದ್ದ ಸಾಜಿದ್ ಮುಲ್ಲಾ ಅವರನ್ನು ಅಕ್ಟೋಬರ್ 1 ರಂದು ಕಾರವಾರ ಎಡಿಸಿಯಾಗಿ ನೇಮಿಸಲಾಗಿತ್ತು. ಇಲ್ಲಿದ್ದ ಪ್ರಕಾಶ ರಜಪೂತ ಅವರನ್ನು ಜಮಖಂಡಿಗೆ ವರ್ಗಾಯಿಸಲಾಗಿತ್ತು.
ಸಾಜಿದ್ ಮುಲ್ಲಾ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಮೂಲದವರಾಗಿದ್ದು. 2004 ರ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದಾರೆ. ಅವರು ಹಿಂದೆ ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ವಿಶೇಷ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಭಟ್ಕಳ ಎಸಿಯಾಗಿ, ಆ ನಂತರ ರಾಷ್ಟ್ರಿಯ ಹೆದ್ದಾರಿ ಹೊನ್ನಾವರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.