ತಂಬಾಕು ಅಂಗಡಿಗಳನ್ನು ಮುಚ್ಚಿಸುವಂತೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೂಚನೆ

17TMK_ADC_MEETNIG new
Published on

ತುಮಕೂರು: ಜಿಲ್ಲಾದ್ಯಂತ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ 100 ಮೀಟರ್ ಅಂತರಗೊಳಗಿರುವ ತಂಬಾಕು ಅಂಗಡಿಗಳನ್ನು ಮುಚ್ಚಿಸುವಂತೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಆಸ್ಪತ್ರೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿರುವ ತಂಬಾಕು ಅಂಗಡಿಗಳನ್ನು ತೆರವುಗೊಳಿಸುವಂತೆ ಹಾಗೂ ಸರ್ಕಾರದ ಅನುಮತಿ ಪಡೆಯದ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಸ್ಮಾರ್ಟ್‌ಸಿಟಿ ವತಿಯಿಂದ ಅಳವಡಿಸಲಾಗಿರುವ ಎಲ್‌ಇಡಿ ಬೋರ್ಡ್‌ಗಳಲ್ಲಿ ತಂಬಾಕು ದುಷ್ಪರಿಣಾಮದ ಬಗ್ಗೆ ಜಾಹೀರಾತು ನೀಡಬೇಕು, ಅಲ್ಲದೇ ಪಾಲಿಕೆ ವತಿಯಿಂದ ವ್ಯಾಪಾರಕ್ಕೆಂದು ನೀಡಲಾಗುವ ಪರವಾನಗಿಯಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿತ ಫಲಕಗಳನ್ನು ಹಾಕಬೇಕು ಎಂದರು.

ರಾಜ್ಯದಲ್ಲಿಯೇ ತಂಬಾಕು ನಿಯಂತ್ರಣ ಕಾರ್ಯಾಚರಣೆಯಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿದೆ. ತುಮಕೂರನ್ನು ತಂಬಾಕು ನಿಯಂತ್ರಣ ತಾಲೂಕು ಎಂದು ಘೋಷಣೆ ಮಾಡಿದ್ದು, 2ನೇ ಬಾರಿಗೆ ತಿಪಟೂರು ತಾಲೂಕಿನಲ್ಲಿ ಹೆಚ್ಚಿನ ಕಾರ್ಯಚಾರಣೆ ನಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ತಂಬಾಕು ನಿಯಂತ್ರಣ ಸಂಯೋಜಕ ಡಾ.ಪ್ರಭಾಕರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ರವಿಪ್ರಕಾಶ್, ಕಾನೂನು ಅರಿವು ನೆರವು ಅಧಿಕಾರಿ ರಾಘವೇಂದ್ರ ಆರ್‌ಸಿಹೆಚ್ ಅಧಿಕಾರಿ ಡಾ.ಕೇಶವ್‌ರಾಜ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಮತ್ತಿತರರು ಇದ್ದರು.

ತಂಬಾಕು ಸೇವನೆ ಕುರಿತು ಅರಿವು: ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾದ್ಯಂತ ಏಕಕಾಲದಲ್ಲಿ ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ ಕೈಗೊಂಡು ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ತಂಬಾಕು ಸೇವನೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ.ಚಂದ್ರಿಕಾ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 57 ಕಾರ್ಯಾಚರಣೆಗಳನ್ನು ಕೈಗೊಂಡು 2439 ಪ್ರಕರಣ ದಾಖಲಿಸಿ ಒಟ್ಟು 2,81,850 ರೂಪಾಯಿದಂಡವನ್ನು ಸಂಗ್ರಹಿಸಲಾಗಿದೆ. ತಿಪಟೂರು

ತಾಲೂಕಿನಲ್ಲಿ 798 ಪ್ರಕರಣ ದಾಖಲಿಸಿಕೊಂಡು 88940 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net