

ಹೂವಿನಹಡಗಲಿ: ಶಾಲೆ-ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ ತಾಲೂಕಿನ ಶಿವಲಿಂಗನಹಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಬಸ್ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಉಪನಾಯಕನಹಳ್ಳಿ ಬಸರಕೋಡುತಾಂಡಾ, ಉಪನಾಯಕನಹಳ್ಳಿ, ಶಿವಲಿಂಗನಹಳ್ಳಿ, ಮಿರಾಕೋರನಹಳ್ಳಿ ಗ್ರಾಮಗಳಿಗೆ ಒಂದೇ ಬಸ್ ಸಂಚರಿಸುತ್ತಿದ್ದು, ಇದರಲ್ಲೇ ನಿತ್ಯ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬೇಕಿದೆ. ಬಸರಕೋಡುತಾಂಡಾ ಮತ್ತು ಉಪನಾಯಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳೇ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
ಇದರಿಂದಾಗಿ ಶಿವಲಿಂಗನಹಳ್ಳಿ, ಮೀರಾಕೊರನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಬೇಕಾಗಿದೆ ಎಂದು ದೂರಿದರು.
ಸಾರಿಗೆ ಅಧಿಕಾರಿಗಳು ಹೆಚ್ಚುವರಿ ಬಸ್ ಸಂಚರಿಸಲು ಕ್ರಮವಹಿಸುವುದಾಗಿ ಹೇಳುವವರೆಗೂ ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಚಾಲಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮನವೊಲಿಸಿದರು.
ಪ್ರಯಾಣ ರದ್ದು:
ಪಟ್ಟಣದಿಂದ ನಿತ್ಯ ಧರ್ಮಸ್ಥಳ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ಸಂಚರಿಸುತ್ತಿತ್ತು. ಆದರೆ ಸಾರಿಗೆ ಘಟಕದಲ್ಲಿ ವಾಹನಗಳ ಕೊರತೆಯಿಂದ ಈ ಮಾರ್ಗದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬುಧವಾರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ 30 ಕ್ಕೂ ಹೆಚ್ಚು ಮಹಿಳೆಯರು ಬಸ್‌ಗಾಗಿ ಕಾದು ಕುಳಿತು ವಾಹನ ಬಾರದೆ ಇದ್ದಾಗ ಊರುಗಳಿಗೆ ಹಿಂದಿರುಗಿದ್ದಾರೆ.