ಮಂಗಳೂರಿನಿಂದ ನವದೆಹಲಿಗೆ ಹೆಚ್ಚುವರಿ 2ನೇ ದೈನಂದಿನ ವಿಮಾನ ಸಂಚಾರ

IXE
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅ.26ರಿಂದ ಆರಂಭವಾಗುವ ಚಳಿಗಾಲದ ವಿಮಾನಯಾನ (ದೇಶೀಯ ಮತ್ತು ಅಂತಾರಾಷ್ಟ್ರೀಯ) ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮಂಗಳೂರಿನಿಂದ ನವದೆಹಲಿಗೆ ಹೆಚ್ಚುವರಿ 2ನೇ ದೈನಂದಿನ ವಿಮಾನ ಸಂಚಾರ, ಮಂಗಳೂರು- ತಿರುವನಂತಪುರಂ ನಡುವೆ ವಾರಕ್ಕೆ ಮೂರು ಬಾರಿ ಸಂಚಾರ ಆರಂಭ, ದಮಾಮ್, ದೋಹಾ, ಕುವೈತ್, ಜೆಡ್ಡಾ ಮತ್ತು ಬಹ್ರೇನ್‌ಗೆ ಹೆಚ್ಚುವರಿ ಸಾಪ್ತಾಹಿಕ ವಿಮಾನ ಸಂಚಾರ ಸೇರಿದಂತೆ ವಿವಿಧೆಡೆ ವಿಮಾನಯಾನ ಆರಂಭಿಸಲು ವೇಳಾಪಟ್ಟಿ ಪ್ರಕಟಿಸಿದೆ. ಇದು 2026ರ ಮಾ.28ರವರೆಗೆ ಮುಂದುವರಿಯಲಿದೆ.

27ರಿಂದ ನವದೆಹಲಿಗೆ ಹೆಚ್ಚುವರಿ ವಿಮಾನ:

ಈಗಾಗಲೇ ಮಂಗಳೂರು- ನವದೆಹಲಿ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಐಎಕ್ಸ್ 1275 /ಐಎಕ್ಸ್ 1276) ದಿನಂಪ್ರತಿ ಕಾರ್ಯಚರಿಸುತ್ತಿದೆ. ಈಗ ಹೆಚ್ಚುವರಿಯಾಗಿ ಅ.27ರಿಂದ ಎರಡನೇ ದೈನಂದಿನ ವಿಮಾನವನ್ನು (ಐಎಕ್ಸ್ 1781 /ಐಎಕ್ಸ್ 1782) ಪರಿಚಯಿಸಲಿದೆ. ಇದರೊಂದಿಗೆ ಬೆಂಗಳೂರಿಗೆ ಪ್ರತಿದಿನ ಎರಡು ಮತ್ತು ಮುಂಬೈಗೆ ದಿನಂಪ್ರತಿ ಒಂದು ವಿಮಾನ ಸಂಚಾರ ಮುಂದುವರಿಯಲಿದೆ.

ವೇಳಾಪಟ್ಟಿ: ಏರ್ ಇಂಡಿಯಾ (ಐಎಕ್ಸ್ 1781) ಹೆಚ್ಚುವರಿ ವಿಮಾನವು ಪ್ರತಿದಿನ ಮಂಗಳೂರಿನಿಂದ 12.30 ಗಂಟೆಗೆ ಹೊರಟು 15:25ಕ್ಕೆ ನವದೆಹಲಿ ತಲುಪಲಿದೆ. ನವದೆಹಲಿಯಿಂದ (ಐಎಕ್ಸ್ 1782) 16:15ಕ್ಕೆ ಹೊರಟು 19:10 ಗಂಟೆಗೆ ಮಂಗಳೂರು ತಲುಪಲಿದೆ.

 ತಿರುವನಂತಪುರಂ ವಿಮಾನ:

ಮಂಗಳೂರು ಏರ್‌ಪೋರ್ಟ್‌ನಿಂದ ಈ ವರ್ಷ ಹೊಸದಾಗಿ ಕೇರಳದ ತಿರುವನಂತಪುರಂಗೆ ವಾರಕ್ಕೆ ಮೂರು ಬಾರಿ ನೂತನ ವಿಮಾನ ಸಂಚಾರ ಅ.27ರಿಂದ ಆರಂಭವಾಗಲಿದೆ. ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಏರ್ ಇಂಡಿಯಾ (ಐಎಕ್ಸ್ 5531) ಮಂಗಳೂರಿನಿಂದ 9.15ಕ್ಕೆ ಹೊರಟು 10.35ಕ್ಕೆ ತಿರುವನಂತಪುರಂ ತಲುಪಲಿದೆ. ಅದೇ ರೀತಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ತಿರುವನಂತಪುರಂನಿಂದ 4.25ಕ್ಕೆ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 5.45ಕ್ಕೆ ತಲುಪಲಿದೆ.

 ಅಂತಾರಾಷ್ಟ್ರೀಯ ವಿಮಾನಯಾನ:

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಋತುಮಾನದಲ್ಲಿ ದುಬೈಗೆ ವಾರದಲ್ಲಿ ಆರು ದಿನ ಮತ್ತು ಪ್ರತಿ ಮಂಗಳವಾರ ಒಂದು ವಿಮಾನವನ್ನು ನಿರ್ವಹಿಸಲಿದೆ. ಅಬುಧಾಬಿಗೆ ಪ್ರತಿದಿನ ಒಂದು ವಿಮಾನ, ದಮ್ಮಾಮ್‌ಗೆ ವಾರಕ್ಕೆ ಐದು, ಬಹ್ರೇನ್, ದೋಹಾ, ಜೆಡ್ಡಾ ಮತ್ತು ಕುವೈತ್‌ಗೆ ಕ್ರಮವಾಗಿ ವಾರಕ್ಕೆ ಮೂರು ವಿಮಾನ ಸಂಚಾರ ನಡೆಸಲಿದೆ. ದಮ್ಮಾಮ್ ಮತ್ತು ದೋಹಾಕ್ಕೆ ಕ್ರಮವಾಗಿ ಈಗಿರುವ 4 ಮತ್ತು 2 ವಿಮಾನಗಳಿಗೆ ಹೆಚ್ಚುವರಿಯಾಗಿ ಒಂದು ವಿಮಾನ ಸಂಚಾರ ಮಾಡಲಿದೆ. ಬಹ್ರೇನ್, ಕುವೈತ್ ಮತ್ತು ಜೆಡ್ಡಾಗೆ ಇನ್ನೂ ಎರಡು ಹೆಚ್ಚುವರಿ ಸಾಪ್ತಾಹಿಕ ವಿಮಾನಗಳನ್ನು ಸೇರಿಸಿದೆ.

ದೇಶೀಯವಾಗಿ ಇಂಡಿಗೊ ಸಂಸ್ಥೆಯು ಬೆಂಗಳೂರಿಗೆ ಆರು, ಮುಂಬೈಗೆ ಮೂರು, ಹೈದರಾಬಾದ್‌ಗೆ ಎರಡು ಮತ್ತು ದೆಹಲಿ ಮತ್ತು ಚೆನ್ನೈಗೆ ತಲಾ ಒಂದು ವಿಮಾನ ಸಂಚಾರ ನಡೆಸಲಿದೆ. ಅಲ್ಲದೆ, ಹೈದರಾಬಾದ್ ಮತ್ತು ಚೆನ್ನೈಗೆ 72 ಆಸನಗಳ ಎಟಿಆರ್ ವಿಮಾನವನ್ನು ಮತ್ತು ಇತರ ಮೂರು ದೇಶೀಯ ಸ್ಥಳಗಳಿಗೆ (ಬೆಂಗಳೂರು, ಮುಂಬೈ, ದೆಹಲಿ) ಏರ್‌ಬಸ್ ಎ -320 / 321 ವಿಮಾನವನ್ನು ನಿಯೋಜಿಸಲಿದೆ. ಅಂತಾರಾಷ್ಟ್ರೀಯವಾಗಿ, ಇಂಡಿಗೊ ಅಬುಧಾಬಿಗೆ ಪ್ರತಿದಿನ ಒಂದು ವಿಮಾನ ಮತ್ತು ದುಬೈಗೆ ವಾರಕ್ಕೆ ನಾಲ್ಕು ಏರ್‌ಬಸ್ ಫ್ಲೀಟ್ ವಿಮಾನಗಳನ್ನು ನಿರ್ವಹಿಸಲಿದೆ ಎಂದು ಮಂಗಳೂರು ಏರ್‌ಪೋರ್ಟ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net