

ಶಿರಸಿ: ಶಾಲೆಯಲ್ಲಿ ಒಂದು ಮಗು ಇದ್ದರೂ ಶಿಕ್ಷಣ ಇಲಾಖೆ ಎಂದಿಗೂ ನಿರ್ಲಕ್ಷ್ಯಿಸಿಲ್ಲ. ಕಲೆ, ಕ್ರೀಡಾ ಚಟುವಟಿಕೆ, ಶಿಕ್ಷಣ ವ್ಯವಸ್ಥೆ ಎಲ್ಲವೂ ಒಂದೇಕಡೆ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ರಾಜ್ಯ ಸರ್ಕಾರ ಆರಂಭಿಸುತ್ತಿದೆ. ಶಿರಸಿ-ಸಿದ್ದಾಪುರ ತಾಲೂಕಿಗೆ ಹೆಚ್ಚುವರಿಯಾಗಿ 20 ಶಾಲೆಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಆವೆಮರಿಯಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಶಾಲೆಗಳಲ್ಲಿ ಕಡಿಮೆ ಮಕ್ಕಳಿದ್ದರೆ ಅವರಿಗೆ ಮನೆಯ ವಾತಾವರಣದಂತಾಗುತ್ತದೆ ಹೊರತು ಸ್ಪರ್ಧಾತ್ಮಕ ಅಥವಾ ಶೈಕ್ಷಣಿಕ ವಾತಾವರಣ ಬರುವುದಿಲ್ಲ. ಹೀಗಾಗಿ, ಮಕ್ಕಳ ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸಿ, ಅವರನ್ನು ಈ ಶಿಕ್ಷಣ ವ್ಯವಸ್ಥೆಯ ಅಡಿತರಲಿದ್ದೇವೆ ಎಂದರು.
ಮಕ್ಕಳನ್ನು ಶಾಲೆಗೆ ಸೇರಿಸುವುದು ಎಷ್ಟು ಪ್ರಮುಖವೋ ಮಕ್ಕಳು ಶಾಲೆ ತಪ್ಪಿಸದಂತೆ ನೋಡಿಕೊಳ್ಳುವುದೂ ಅಷ್ಟೇ ಪ್ರಮುಖವಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸದೇ ಬೇರೆ ಕೆಲಸಕ್ಕೆ ಹಚ್ಚಿದರೆ ಪಾಲಕರೇ ಮಕ್ಕಳ ಭವಿಷ್ಯ ಹಾಳು ಮಾಡಿದಂತಾಗುತ್ತದೆ. ಮಕ್ಕಳ ಉಜ್ವಲ ಭವಿಷ್ಯ ಶಾಲೆಗಳಿಂದ ಮಾತ್ರ. ಹೀಗಾಗಿ, ಮಕ್ಕಳೂ ಶಾಲಾ ಸಮಯದಲ್ಲಿ ಪಾಲಕರೊಂದಿಗೆ ಹೋಗಬೇಡಿ ಎಂದರು.
ಮಕ್ಕಳು ಶಾಲೆಗೆ ಬಂದರೆ ಮಾತ್ರ ಶಿಕ್ಷಕರಿಗೂ, ಇಲಾಖೆಗೂ ಗೌರವ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದೆ. ವಾರ್ಷಿಕವಾಗಿ 50 ಸಾವಿರ ಕೋಟಿ ರೂ.ಗಳನ್ನು ಶಿಕ್ಷಣ್ಕಕಾಗಿ ಖರ್ಚು ಮಾಡುತ್ತಿದೆ. ಈಗ ಮಕ್ಕಳು ದೈಹಿಕವಾಗಿಯೂ ಬಲಿಷ್ಠರಾಗಬೇಕು ಎಂಬ ಉದ್ದೇಶದೊಂದಿಗೆ ಅಜೀಂ ಪ್ರೇಮ್‌ಜಿ ಅವರ ಸಹಯೋಗದೊಂದಿಗೆ 1600 ಕೋಟಿ ರೂ. ಖರ್ಚು ಮಾಡಿ ಪ್ರತಿ ದಿನ ಮೊಟ್ಟೆ ನೀಡುತ್ತಿದ್ದಾರೆ. ಶಿಕ್ಷಕರನ್ನು ಉಪಯೋಗಿಸಿಕೊಳ್ಳುವಲ್ಲೂ ನಮ್ಮ ಇಲಾಖೆ ಹಿಂದೆ ಇದೆ. ಪ್ರತಿಭಾ ಕಾರಂಜಿ ನಡೆಸಲು ಅನುದಾನವನ್ನೂ ಕಡಿಮೆ ನೀಡುತ್ತಿದ್ದೇವೆ. ದಾನಿಗಳು ಕೈ ಜೋಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮಾತ್ರ ಹಿರಿಯರು ಕಂಡ ಕನಸು ಸಾಕಾರವಾಗುತ್ತದೆ. ಮಕ್ಕಳ ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಇಲ್ಲಿದೆ. ಸಾವಿರಾರು ರೂ. ಖರ್ಚು ಮಾಡಿ ಖಾಸಗಿ ಶಾಲೆಗೇಕೆ ಕಳಿಸಬೇಕು ? ಎಸ್ ಎಸ್ ಎಲ್ ಸಿಯಲ್ಲಿ ಸರ್ಕಾರಿ ಶಾಲೆ ಫಲಿತಾಂಶವೇ ಉತ್ತಮವಾಗಿ ಬರುತ್ತಿವೆ ಎಂದರು.
ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿನ ಸೋಲು ಗೆಲುವನ್ನು ಮಕ್ಕಳು ಸಮಾನವಾಗಿ ಸ್ವೀಕರಿಸಬೇಕು. ಸೋಲನ್ನು ಮುಂದೆ ಗೆಲುವಾಗಿಸಿಕೊಳ್ಳಲು ಶ್ರಮಿಸಬೇಕು ಎಂದರು.
ಹುಲೆಕಲ್ ಗ್ರಾ.ಪಂ. ಅಧ್ಯಕ್ಷ ಕಾಸೀಂ ಸಾಬ್, ಡಿಡಿಪಿಐ ಪಿ. ಬಸವರಾಜ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಬಿಒ ನಾಗರಾಜ ನಾಯ್ಕ ಇತರರಿದ್ದರು.