

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕುಡಿಯುವ ನೀರಿನ ಮೂಲವಾದ ರಾಮ ಸಮುದ್ರ ಕೆರೆಗೆ ತ್ಯಾಜ್ಯ ನೀರು ಸೇರಿ ಮೂಲಕ ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಕೆರೆಗೆ ತ್ಯಾಜ್ಯ ನೀರು ಬಿಡುವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮವಹಿಸಬೇಕು ಎಂದು ಪುರಸಭೆ ಸದಸ್ಯ ಶುಭದ ರಾವ್ ಆಗ್ರಹಿಸಿದರು.
ಬುಧವಾರ ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಯುಜಿಡಿ ನೀರನ್ನು ಶುಚಿಗೊಳಿಸಿ ಪರ್ಯಾಯವಾಗಿ ಯುಜಿಡಿ ಚರಂಡಿಗೆ ಬಿಡಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ವಿನ್ನಿ ಬೋಲ್‌ಡ್, ಹರೀಶ್ ದನಿಗೂಡಿಸಿದರು.
ಪುರಸಭೆ ಮುಖ್ಯ ಅಧಿಕಾರಿ ರೂಪಾ ಶೆಟ್ಟಿ ಪ್ರತಿಕ್ರಿಯಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲಾಗುವುದು. ಕೆರೆಗೆ ಕಲುಷಿತ ನೀರು ಬಿಡುವವರ ವಿರುದ್ಧ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸದಸ್ಯ ಅಶ್ಪಕ್ ಅಹಮ್ಮದ್ ಮಾತನಾಡಿ, ಕಾರ್ಕಳದಲ್ಲಿ ವ್ಯವಸ್ಥಿತ ಬೀದಿ ದೀಪ ರೂಪಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ವಿಳಂಬವಾಗುತ್ತಿದೆ. ನಗರದಲ್ಲಿ ಬೀದಿನಾಯಿಗಳ ಕಾಟದಿಂದ ಜನರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಕಳದಲ್ಲಿ ಮಾಸಿದ ಫಲಕಗಳು ಪ್ರವಾಸಿಗರು, ಜನರನ್ನು ಸ್ವಾಗತಿಸುವಂತಾಗಿದೆ. ಇದು ಕಾರ್ಕಳದಂತ ಊರಿಗೆ ಕಪ್ಪು ಚುಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷ ಯೊಗೀಶ್ ದೇವಾಡಿಗ ಉತ್ತರಿಸಿ, ಹಂತಹಂತವಾಗಿ ಬೀದಿದೀಪ ಯೋಜನೆ ಜಾರಿಗೊಳಿಸಲಾಗುತ್ತದೆ. ಈಗಾಗಲೆ ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಲಾಗುವುದು. ಮಾಸಿದ ಫಲಕ ಹೊಸದಾಗಿ ರೂಪಿಸಲು ಅನುದಾನದ ಕೊರತೆ ಇದೆ ಎಂದರು.
ಸದಸ್ಯೆ ಪ್ರತಿಮಾ ಅವರು 20ಕ್ಕೂ ಅಧಿಕ ಮನೆಗಳಿಗೆ ಹಕ್ಕುಪತ್ರ ಸಿಗದ ಬಗ್ಗೆ ಪ್ರಸ್ತಾಪಿಸಿ ಜನನ-ಮರಣ ಪತ್ರ ತಿದ್ದುಪಡಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಸೋಮನಾಥ್ ನಾಕ್ ಸಹಮತ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಯೋಗೀಶ್ ಮಾತನಾಡಿ, ಲೈಸೆನ್ಸ್ ಇಲ್ಲದೆ ಪೇಟೆಗಳಲ್ಲಿ ಅನಧಿಕೃತವಾಗಿ ಎಷ್ಟು ಅಂಗಡಿಗಳು ಕಾರ್ಯಾಚರಿಸುತ್ತಿವೆ. ನವೀಕರಣಕ್ಕೆ ಬಾಕಿ ಇರುವ ಅಂಗಡಿ, ಮುಂಗಟ್ಟುಗಳಿಗೆ ಸೂಕ್ತ ರೀತಿಯಲ್ಲಿ ನೊಟೀಸ್ ನೀಡಬೇಕು. ಅಧಿಕಾರಿಗಳು ಈ ಬಗ್ಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಅಧಿಕಾರಿಗಳು ಪ್ರತಿಕ್ರಿಯಿಸಿ ಲೈಸೆನ್ಸ್ ಇಲ್ಲದೇ ಕಾರ್ಯಾಚರಿಸುತ್ತಿರುವ 10 ಅಂಗಡಿಗಳಿಗೆ ನೊಟೀಸ್ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು ಎಂದರು.