

ಮೈಸೂರು: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಶ್ರೇಷ್ಠ ಕಾಯಕ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಸವಮಾರ್ಗ ವ್ಯಸನಮುಕ್ತ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ವ್ಯಸನಗಳು ಸಮಾಜಕ್ಕೆ ದೊಡ್ಡ ಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ವ್ಯಸನಕ್ಕೆ ಬಲಿಯಾಗುತ್ತಿದೆ. ಇದರಿಂದ ಕುಟುಂಬಗಳು ಬೀದಿಗೆ ಬೀಳುವ ಸಂದರ್ಭವೂ ಎದುರಾಗುತ್ತದೆ. ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆ 38ಕ್ಕೂ ಹೆಚ್ಚಿನ ಉಚಿತವಾಗಿ ಶಿಬಿರಗಳನ್ನು ಆಯೋಜಿಸಿ ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಮಾರ್ಗ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದೆ. ಎಲ್ಲರೂ ನಮ್ಮವರೇ ಎನ್ನುವ ಆಶಯ ಇಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವ ಕೆಲಸಕ್ಕೆ ಶುಭವಾಗಲಿ, ರಾಜ್ಯದ ಎಲ್ಲ ಕುಟುಂಬಗಳು ಸುಖ, ಶಾಂತಿಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಸವಮಾರ್ಗ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಎಂಎಲ್‌ಸಿ ಸಿ.ಎನ್. ಮಂಜೇಗೌಡ, ಜೆಡಿಎಸ್ ನಾಯಕರಾದ ರವಿ ಕುಮಾರ್, ಪ್ರೇಮ ಶಂಕರೇಗೌಡ, ಬಸವಮಾರ್ಗ ಸಂಸ್ಥಾಪಕರಾದ ಎಸ್.ಬಸವರಾಜು, ಎಸ್.ವೆಂಕಟೇಶ್ ಕುಮಾರ್, ಎಸ್.ರಾಜು ಇತರರು ಇದ್ದರು.