

ಚಿತ್ರದುರ್ಗ: ದುಶ್ವಟಗಳಿಂದ ದೂರವಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಯುವ ಜನರಿಗೆ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯಮದ್ಯಪಾನ ಸಂಯಮ ಮಂಡಳಿ ಸಂಯುಕ್ತಾಶ್ರಯದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯಮಹಂತೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಯುವ ಜನತೆ ದುಶ್ಚಟಗಳಿಂದ ದೂರವುಳಿದು ಸುಸಂಸ್ಕೃತ ಬದುಕು ಕಟ್ಟಿಕೊಳ್ಳಬೇಕು. ಪಠ್ಯದಲ್ಲಿ ಮದ್ಯ ಮತ್ತು ಮಾದಕ ವಸ್ತು ಸೇವನೆ ವ್ಯಸನಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕೆಂದರು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ದುಶ್ಚಟಗಳು ಕುಟುಂಬ, ಸಮಾಜಕ್ಕೆ ಮಾರಕವಾಗಿವೆ. ಮೊಬೈಲ್ ಚಟವೂ ತುಂಬಾ ಆಘಾತಕಾರಿಯಾಗಿದೆ. ಇದರಿಂದ ತಲೆನೋವು, ನಿದ್ರಾಹೀನತೆ, ಆಲಸ್ಯ, ಓದಿನಲ್ಲಿ ನಿರಾಸಕ್ತಿ, ಚಟುವಟಿಕೆ ರಹಿತ ಬದುಕು ಸೇರಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದ ಅವರು, ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
ಮಾನಸಿಕ ಆರೋಗ್ಯ ತಜ್ಞ ಡಾ. ಮಂಜುನಾಥ್ ಉಪನ್ಯಾಸ ನೀಡಿ, ಉತ್ತಮ ಆರೋಗ್ಯಕ್ಕೆ ದುಶ್ಚಟಗಳಿಂದ ದೂರವಿರಬೇಕು. ವ್ಯಸನಗಳಿಗೆ ಬಲಿಯಾದರೆ ಪ್ರಜ್ಞಾವಂತಿಕೆ ಕಡಿಮೆಯಾಗಿ ಕ್ರಿಮಿನಲ್ ಆಗಿ ಬದಲಾಗಬೇಕಾಗುತ್ತದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಮ ಹಾಂತ ಶಿವಯೋಗಿಗಳ ಆಪ್ತರಾದ ಕೆ. ಚಂದ್ರಪ್ಪ, ಪ್ರಾಂಶುಪಾಲ ಎಂ.ಎನ್. ರವಿಕಾಂತ, ಆಕಾಶವಾಣಿಯ ನವೀನ್‌ಮಸ್ಕಲ್ ಮತ್ತಿತರರು ಇದ್ದರು. ರಂಗಕರ್ಮಿ ಕೆಪಿಎಂ ಗಣೇಶಯ್ಯ ನಿರೂಪಿಸಿದರು.
---ಕೋಟ್---
ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯಸರ್ಕಾರ ವ್ಯಸನ ಮುಕ್ತ ದಿನವೆಂದು ಆಚರಿಸುತ್ತಿದೆ. ಸಮಾಜವನ್ನು ವ್ಯಸನ ಮುಕ್ತ ಮಾಡಬೇಕು. ಸದೃಢ ಸಮಾಜ ಹಾಗೂ ದೇಶ ನಿರ್ಮಾಣ ಮಾಡಬೇಕು ಎಂಬ ಶ್ರೀಗಳ ಆಶಯವನ್ನು ನಾವೆಲ್ಲರೂ ಪಾಲಿಸ ಬೇಕಿದೆ.
ಬಿ.ವಿ. ತುಕಾರಾಂರಾವ್, ಜಿಲ್ಲಾ ವಾರ್ತಾಧಿಕಾರಿ, ಚಿತ್ರದುರ್ಗ
---
ಮೌಲ್ಯಗಳ ಜಾಗೃತಿ ಮೂಡಿಸಿದ ಶರಣರು
ಮೊಳಕಾಲ್ಮೂರು: ನಾಗರಿಕ ಸಮಾಜ ದುಶ್ಚಟ ತ್ಯಜಿಸಿ ಮಾನವೀಯ ಮೌಲ್ಯಗಳ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬುದು ಇಳಕಲ್ ಮಠದ ಡಾ. ಮಹಾಂತ ಅಪ್ಪಗಳ ಧ್ಯೇಯವಾಕ್ಯವಾಗಿತ್ತು ಎಂದು ಸಿದ್ದಯ್ಯನಕೋಟೆ ಶ್ರೀಮಠದ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಕಂದಾಚಾರ, ಮೌಢ್ಯ ಹಾಗೂ ದುಶ್ಚಟಗಳ ಕಡಿವಾಣಕ್ಕೆ ಇಡೀ ರಾಜ್ಯದ ಉದ್ದಗಲಕ್ಕೂ ದೊಡ್ಡಮಟ್ಟದ ಜನಾಂದೋಲನ ನಡೆಸುವ ಮೂಲಕ ಕೆಟ್ಟ ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಮಾನವೀಯ ಸದ್ಗುಣ ಬೆಳೆಸಿಕೊಳ್ಳಿ ಎಂದು ಜನ ಜಾಗೃತಿ ಮೂಡಿಸಿದ ಶರಣರ ಕಾಯಕ ಆತ್ಯಂತ ಆದರ್ಶಪ್ರಾಯವಾಗಿತ್ತು. ಜಾತಿರಹಿತ ಸಮಾಜ ನಿರ್ಮಾಣವೇ ಅವರ ಬಹುದೊಡ್ಡ ನಿಲುವಾಗಿತ್ತು ಎಂದರು.
ಪ್ರಾಚಾರ್ಯ ಬಿ. ಗೋವಿಂದಪ್ಪ ಮಾತನಾಡಿ, ಡಾ. ಮಹಾಂತ ಶಿವಯೋಗಿಗಳು ಈ ನಾಡು ಕಂಡಂತಹ ಅಪರೂಪದ ಮಾಣಿಕ್ಯ. ಇಡೀ ಮಾನವ ಕುಲಕ್ಕೆ ಅನ್ನದಾನ, ಅಕ್ಷರದಾನ ಧಾರೆಯರೆಯುವ ಮೂಲಕ ಸಮಾನತೆಯ ಸಮಾಜ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.
ಉಪ ತಹಸೀಲ್ದಾರ್ ಮಹಾಂತೇಶ್, ತಾಪಂ ಇಒ ಎಚ್. ಹನುಮಂತಪ್ಪ, ಪಪಂ ಮುಖ್ಯಾಧಿಕಾರಿ ಲಿಂಗರಾಜ್, ಉಪನ್ಯಾಸಕರಾದ ರವಿಕುಮಾರ, ಡಾ. ರಂಗಪ್ಪ, ಕಸಾಪ ತಾಲೂಕು ಅಧ್ಯಕ್ಷ ಜಿಂಕಾ ಶ್ರೀನಿವಾಸ, ಪಟೇಲ್ ಪಾಪನಾಯಕ, ವಾಂಜ್ರೆ ರಮೇಶ್, ವಿನಯ್‌ಕುಮಾರ, ಲತೀಫ್ ಮಾಸ್ತರ್, ಓಬಣ್ಣ, ಕಾಂತರಾಜ, ಕಂದಾಯ ಅಧಿಕಾರಿ ದೇವೇಂದ್ರಪ್ಪ, ಮಲ್ಲಿಕಾರ್ಜುನ, ರಂಗನಾಥ ಇತರರಿದ್ದರು.