

ಮಂಡ್ಯ: ಯುವ ಶಕ್ತಿ ಮಾದಕ ವಸ್ತುಗಳಿಂದ ದೂರವಿರಬೇಕು ಹಾಗೂ ತಮ್ಮ ಮನೆಯವರು ಸುತ್ತ ಮುತ್ತಲಿನ ಕುಟುಂಬದವರು ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರಕ್ಷಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್, ಪದವಿ ಪೂರ್ವ ಶಿಕ್ಷಣ ಇಲಾಖೆ, ಭಾರತೀಯ ರೆಡ್‌ಕ್ರಾಸ್, ಅನನ್ಯ ಹಾರ್ಟ್ ಸಂಸ್ಥೆ ವತಿಯಿಂದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪಾಲಕರು ಮಧ್ಯಪಾನ ಅಥವಾ ಇನ್ನಿತರೆ ದುಶ್ಚಟಗಳಿಗೆ ದಾಸರಾಗಿದ್ದರೆ, ಅದರ ದುಷ್ಪರಿಣಾಮಗಳ ಕುರಿತು ತಿಳಿ ಹೇಳಬೇಕು. ಇದರೊಂದಿಗೆ ಅವರ ಮನ ಪರಿವರ್ತನೆ ಮಾಡಬೇಕು ಎಂದರು.
ದೇಶದ ಅಭಿವೃದ್ಧಿ ಯುವ ಜನತೆ ಮೇಲೆ ಅವಲಂಬಿತವಾಗಿದೆ. ಹುಟ್ಟುತ್ತಲೇ ಯಾರು ಒಳ್ಳೆಯವರಾಗಿ ಅಥವಾ ಕೆಟ್ಟವರಾಗಿ ಹುಟ್ಟುವುದಿಲ್ಲ. ಬೆಳೆಯುವ ವಾತಾವರಣ, ಸಮಾಜ, ಕುಟುಂಬ, ಪರಿಸರ ನಮ್ಮನ್ನು ಸಜ್ಜನ ಹಾಗೂ ದುರ್ಜನರಾಗಿ ಪರಿವರ್ತನೆ ಮಾಡುತ್ತದೆ. ಜೀವನ ಅತ್ಯಂತ ಪವಿತ್ರವಾದದ್ದು. ಸಮಾಜಕ್ಕೆ ನಾವು ಉತ್ತಮ ಪ್ರಜೆ, ಕುಟುಂಬಕ್ಕೆ ಒಳ್ಳೆಯ ಮಕ್ಕಳಗಾಬೇಕು, ದುಶ್ಚಟಗಳಿಗೆ ದಾಸರಾದರೆ ಜೀವನವೇ ಹಾಳಾಗುತ್ತದೆ. ಬದುಕಿನಲ್ಲಿ ಒಳ್ಳೆಯ ಹವ್ಯಾಸ, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳಾಗಬೇಕು. ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಲಕ್ಷಾಂತರ ಜನರನ್ನು ವ್ಯಾಸನ ಮುಕ್ತರನ್ನಾಗಿಸಿ ಆರೋಗ್ಯಕರ ಕುಟುಂಬವನ್ನು ಮಾಡಿದ ಕೀರ್ತಿ ಡಾ. ಮಹಾಂತ ಶಿವಯೋಗಿ ಸ್ವಾಮಿಗಳಿಗೆ ಸಲ್ಲುತ್ತದೆ. ‘ಮಾದಕ ಚಟಗಳನ್ನು ನನ್ನ ಜೋಳಿಗೆ ಹಾಕಿ’ ಎಂಬ ಅಭಿಯಾನ ಪ್ರಾರಂಭಿಸುವ ಮೂಲಕ ಊರುರು ಸುತ್ತಿ ಮಾದಕ ಚಟಗಳಿಗೆ ಬಲಿಯಾಗಿದ್ದ ಲಕ್ಷಾಂತರ ಜನರ ಮನಪರಿವರ್ತನೆ ಮಾಡಿದರು. ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಿದವರು ಡಾ.ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಎಂದು ಶ್ಲಾಘಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಾದಕ ವಸ್ತುಗಳು ಮನುಷ್ಯನನ್ನು ಬಲಿ ತೆಗೆದುಕೊಳ್ಳುವ ಒಂದು ದೊಡ್ಡ ಪಿಡುಗು. ಬೇರೆ ಬೇರೆ ರೂಪದಲ್ಲಿ ಮಾದಕವಸ್ತು ತಯಾರಾಗುತ್ತಿರುವುದರಿಂದ ಅನೇಕ ಯುವಕರು ಇಂದು ಮಾದಕ ವಸ್ತುಗಳಿಗೆ ದಾಸರಾಗಿ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಾದಕ ವಸ್ತುಗಳನ್ನು ಸೇವಿಸಿದ ವ್ಯಕ್ತಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಪರಿಜ್ಞಾನವೇ ಇರುವುದಿಲ್ಲ. ಇದರಿಂದಾಗಿ ಅನೇಕ ವಿಧದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅದರಿಂದ ಯುವ ಜನತೆ ಇದರಿಂದ ದೂರವಿರಿ ಎಂದು ತಿಳಿ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಾಮಾನ್ಯವಾಗಿ ಯುವ ಜನತೆ ಖುಷಿ ಪಡೆಯಲು ಮಾದಕ ವ್ಯಸನಿಗಳಾಗುತ್ತಾರೆ. ಜೀವನದ ಮೂಲ ಉದ್ದೇಶವೇ ಖುಷಿ ಪಡುವುದಾಗಿದೆ. ಆದರೆ ಯಾವುದರ ಮೂಲಕ ಎಂಬುವುದು ಅತಿ ಮುಖ್ಯ. ಸ್ನೇಹಿತರೊಂದಿಗೆ ಮಾತನಾಡುವ ಅಥವಾ ಕುಟುಂಬದೊಂದಿಗೆ ಸಮಯ ಕಳೆಯುವುದರ ಮೂಲಕ ಉತ್ತಮ ಅಭ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಸಂತೋಷ ಪಡೆಯಬಹುದು. ಭಾರತ ಇಂದು ಜಗತ್ತಿಗೆ ಯೋಗವನ್ನು ಬಳುವಳಿಯಾಗಿ ನೀಡಿದೆ. ಯೋಗಾಭ್ಯಾಸದಿಂದ ಮಾನಸಿಕವಾಗಿ ಸ್ಥಿರತೆ ಕಾಪಾಡಿಕೊಳ್ಳಬಹುದು. ಯುವ ಪೀಳಿಗೆ ಯೋಗದಂತಹ ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಮಾದಕ ವಸ್ತುಗಳಿಂದ ದೂರವಿರಿ ಎಂದು ಹೇಳಿದರು.
ಉಪನ್ಯಾಸ ನೀಡಿದ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ, ಮಾದಕ ವಸ್ತುಗಳ ಸೇವನೆಯ ಸಂದರ್ಭದಲ್ಲಿ ಅರಿವೇ ಇಲ್ಲದೆ ಬಳಸಿದ ಚುಚ್ಚು ಮದ್ದುಗಳನ್ನೆ ಬಳಸಿಕೊಳ್ಳುತ್ತಾರೆ. ಇದರಿಂದ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಯುವ ಪೀಳಿಗೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಅನುಭವಿಸುತ್ತದೆ. ನಿಮ್ಮ ಸುತ್ತ ಮುತ್ತಲಿನಲ್ಲಿ ಯಾರಾದರೂ ಮಾದಕ ವಸ್ತುಗಳಿಗೆ ದಾಸರಾಗಿದ್ದರೆ 1908 ಸಹಾಯವಾಣಿ ಕರೆ ಮಾಡಿ ತಿಳಿಸಿ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.
ಇದಕ್ಕೂ ಮುನ್ನ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಗಾಂಧಿಭವನದವರೆಗೂ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಜಾಥಾಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು. ಗಾಂಧಿಭವನದಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.