ಮಡಿಕೇರಿಯಲ್ಲಿ ‘ವ್ಯಸನ ಮುಕ್ತ ದಿನಾಚರಣೆ’

'Addiction Free Day' in Madikeri
Published on

ಮಡಿಕೇರಿ:

ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಸಾವಿಗಿಂತ, ಸ್ವಯಂಕೃತ ತಪ್ಪುಗಳಿಂದ ಉಂಟಾಗುವ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಕಾರದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರಾಕೃತಿಕ ವಿಕೋಪದ ಬಗ್ಗೆ ಮುನ್ನೆಚ್ಚರ ವಹಿಸಿದರೂ ಸಹ ಅಲ್ಲಲ್ಲಿ ವಿಕೋಪಗಳು ಸಂಭವಿಸಿ ಸಾವು ನೋವುಗಳು ಉಂಟಾಗುತ್ತದೆ. ಆದರೆ ಸ್ವಯಂಕೃತದಿAದ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಾವು ನೋವುಗಳು ಸಂಭವಿಸುತ್ತಿರುವುದು ದುರಂತ. ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳಿಗೆ ತುತ್ತಾಗಿ ಸುಮಾರು 144 ಮಂದಿ ಮೃತಪಟ್ಟಿದ್ದಾರೆ. 2021 ರಲ್ಲಿ 15 ಮಂದಿ, 2022 ರಲ್ಲಿ 50, 2023 ರಲ್ಲಿ 47, 2024 ರ ಜುಲೈ ಅಂತ್ಯದವರೆಗೆ 34 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಕಾಣೆಯಾದ ಹೆಣ್ಣು ಮಕ್ಕಳ ಪ್ರಕರಣ ಸೇರಿದಂತೆ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಕಳೆದ ನಾಲ್ಕು ವರ್ಷದಲ್ಲಿ 125 ಪ್ರಕರಣ ದಾಖಲಾಗಿದೆ. ಇದರಲ್ಲಿ 61 ಪ್ರಕರಣಗಳು ಪೋಕ್ಸೋ ಪ್ರಕರಣಗಳಾಗಿ ಪರಿವರ್ತನೆಗೊಂಡಿದೆ. 2021 ರಲ್ಲಿ 29 ಇದರಲ್ಲಿ 13 ಪೋಕ್ಸೋ, 2022 ರಲ್ಲಿ 36 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 17 ಪೋಕ್ಸೋ, 2023 ರಲ್ಲಿ 33 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 12 ಪೋಕ್ಸೋ, 2024 ರ ಜುಲೈ ಅಂತ್ಯದವರೆಗೆ 27 ಪ್ರಕರಣಗಳಲ್ಲಿ 19 ಪೋಕ್ಸೋ ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು.
ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ ಪರಿಣಾಮ ಮೂವರಿಗೆ 10 ವರ್ಷಗಳ ಕಾಲ ಕಠಿಣ ಶಿಕ್ಷೆ ಆಗಿದೆ. ಜೊತೆಗೆ ತಲಾ 1 ಲಕ್ಷ ರೂ ವರೆಗೆ ದಂಡ ವಿಧಿಸಲಾಗಿದೆ. ಹಾಗೆಯೇ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದ್ದರಿಂದ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ಮಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯ ಡಾ.ಡೆವಿನ್ ಕರ್ಕಡ ಮಾತನಾಡಿ ಮದ್ಯ ಹಾಗೂ ಮಾದಕ ವಸ್ತುಗಳ ಅವಲಂಬನೆಗೆ ಒಳಗಾಗುವುದು ವ್ಯಸನವಾಗಿದೆ. ಇದು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ವ್ಯಸನದಿಂದ ದೂರವಾಗಲು ಹಲವು ಮಾರ್ಗೋಪಾಯಗಳು ಇದ್ದು, ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 14416 ಇದಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಎಸ್.ವಿ., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್, ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿದರು.
ಉಪನ್ಯಾಸಕಿÀ ಗೌರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪೂರ್ಣಿಮಾ, ಚಿದಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net