

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಾದಕ ವಸ್ತುಗಳ ದುಶ್ಚಟದಿಂದ ದೂರವಿರಿಸುವ ಕೆಲಸ ಮೊದಲಿಗೆ ತಮ್ಮ ಮನೆಗಳಿಂದಲೇ ಆರಂಭವಾಗಬೇಕು, ಮಕ್ಕಳ ಬಳಿ ಮಾದಕ ವಸ್ತುಗಳನ್ನು ತರಿಸಿವುದು ಕಾನೂನು ಬಾಹೀರವಾಗಿದೆ ಹಾಗಾಗಿ ಹೆತ್ತವರು, ಶಿಕ್ಷಕರು ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರು ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ದೇವನಹಳ್ಳಿ ತಾಲೂಕು ಆಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಮಾತನಾಡಿದರು. ಭವಿಷ್ಯಕ್ಕೆ ಮಾರಕವಾಗಿರುವ ಮಾದಕ ವಸ್ತುಗಳಿಂದ ದೂರವಿದ್ದು ಉನ್ನತ ಶಿಕ್ಷಣ ಹಾಗೂ ಸದೃಢ ಭವಿಷ್ಯದ ಕಡೆ ಒತ್ತು ನೀಡಬೇಕು. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ವಸ್ತುಗಳ ವ್ಯಸನದಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ ಹಾಗಾಗಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ನೈಜ ಅರಿವು ಮೂಡಿಸುವುದು ಅವಶ್ಯಕ ಎಂದರು.
ವಿದ್ಯಾರ್ಥಿಗಳು ದೇಶದ ಭವಿಷ್ಯ: ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ ಮಾತನಾಡಿ ವಿದ್ಯಾರ್ಥಿಗಳು ದೇಶದ ಭವಿಷ್ಯ, ಅವರು ಮಾದಕ ವಸ್ತುಗಳಿಗೆ ಬಲಿಯಾಗದಂತೆ ಪ್ರಾರಂಭದಲ್ಲೇ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಮನಸ್ಸು ದುರ್ಬಲವಾದಾಗಲೇ ವ್ಯಕ್ತಿ ವ್ಯಸನದತ್ತ ಆಕರ್ಷಿತನಾಗುತ್ತಾನೆ ಹಾಗಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು, ಆಟಪಾಠ, ಕ್ರೀಡೆ, ಯೋಗ, ಸಂಸ್ಕೃತಿಕ ಚಟುವಟಿಕೆಗಳ ಮೂಲಕ ಮನಸ್ಸು ನಿರ್ದಿಷ್ಟಗೊಳಿಸುವುದು ಅತ್ಯವಶ್ಯಕ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವ್ಯಸನದಿಂದ ಆರೋಗ್ಯ ಹಾಳು: ಈ ದಿನ ಬಹಳ ಮಹತ್ವದ ದಿನವಾಗಿದೆ, ವ್ಯಸನ ಅನ್ನೋದು ನಮ್ಮ ಆರೋಗ್ಯವನ್ನು ಹಾಳುಮಾಡುದರ ಜತೆಗೆ ಮನುಷ್ಯನಿಗೆ ಪ್ರಚೋದನೆ ನೀಡುತ್ತದೆ ಇದರಿಂದ ನಾವೆಲ್ಲರು ದೂರ ಇರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ್‌ಕುಮಾರ್ ಹೇಳಿದರು. ಗಾಂಧೀಜಿ ಒಂದು ಒಳ್ಳೆಯ ಮಾತು ಹೇಳಿದ್ದಾರೆ, ಅದುವೇ ಕುಡಿತ ನಿಮ್ಮ ಸಂಸಾರವನ್ನು ಮಾತ್ರ ಹಾಳು ಮಾಡುವುದಿಲ್ಲ ನಿಮ್ಮ ದೇಹದ ಅತ್ಮವನ್ನೆ ಹಾಳುಮಾಡುತ್ತದೆ ಎಂದಿದ್ದಾರೆ. ಇದರಿಂದ ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುತ್ತದೆ, ದೇಶ ಅಭಿವೃದ್ಧಿ ಹೊಂದಲು ಕೇವಲ ಆರ್ಥಿಕವಾಗಿ ಮುಂದುವರೆದರೆ ಸಾಲದು, ಯುವಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಮಿದುಳಿನ ಕಾರ್ಯವಿಧಾನ ಬದಲಾಗುತ್ತದೆ: ವ್ಯಕ್ತಿಯ ಆಲೋಚನೆಗಳನ್ನು ಬದಲಾಯಿಸುವ ಶಕ್ತಿ ಮೆದುಳಿಗಿರುತ್ತದೆ. ಮಾದಕ ವಸ್ತು ಬಳಕೆಯಿಂದ ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣ ಕುಗ್ಗುತ್ತದೆ. ನಿರಂತರ ಮಾದಕ ವಸ್ತುಗಳ ಸೇವನೆ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಹೇಳಿದರು.ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ವಿಚಾರ ಸಂಕಿರಣ ನಡೆಸಿ ಮಾತಾನಾಡಿದರು. ಯುವಜನತೆ ಸಂತೋಷಕ್ಕೆ, ಗೆಳೆಯರ ಒತ್ತಡ, ನೋವು ನಿವಾರಣೆ ನೆಪ, ಆಧುನಿಕ ಜೀವನ ಶೈಲಿ ಅನುಕರುಣೆ ಮಾಡಲು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ ಇದರಿಂದ ಉದ್ಯೋಗದಲ್ಲಿ ತೊಂದರೆ, ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ, ಕಾನೂನು ಬಾಹಿರ ಕೃತ್ಯಗಳು, ದೈಹಿಕ, ಮಾನಸಿಕ ಕಾಯಿಲೆಗಳು, ರಸ್ತೆ ಅಪಘಾತಗಳು ಸಂಭವಿಸುತ್ತವೆ. ಹೀಗಾಗಿ ಯುವಕರು ಇಂಥ ವಸ್ತುಗಳಿಂದ ದೂರವಿರಬೇಕು ಎಂದರು.