ವ್ಯಸನದಿಂದ ಮೈ-ಮನಗಳ ಸ್ವಾಸ್ಥ್ಯ ಹಾಳು: ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್

Gandhi bhavan
Published on

ಬೆಂಗಳೂರು ಮದ್ಯಪಾನ, ಧೂಮಪಾನದ ವ್ಯಸನಕ್ಕೆ ದಾಸರಾದವರು ತಮ್ಮಮೈಮನಸ್ಸುಗಳ ಜತೆಗೆ ಮೆದುಳಿಗೆ ಹಾನಿ ಉಂಟಾಗುತ್ತದೆ. ತಮ್ಮ ಕುಟುಂಬ, ಹಣ, ಮನಸ್ಸಿನ ದೇಹದ ಸ್ವಾಸ್ಥ್ಯ ಕಳೆದುಕೊಳ್ಳುವರು ಎಂದು ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಗಾಂಧಿ ಭವನದಲ್ಲಿ ಗುರುವಾರ ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಂತೇಶ್ವರ ಸಂಸ್ಥಾನದ ಡಾ. ಮಹಾಂತ ಶಿವಯೋಗಿಗಳ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ‘ವ್ಯಸನಮುಕ್ತ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಯುವ ಜನರು ಗಾಂಜಾ, ಡ್ರಗ್ಸ್, ಕುಡಿತಕ್ಕೆ ದಾಸರಾಗುವ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ದೇಹದ ಮೇಲೆ ಮಾದಕ ವಸ್ತುಗಳು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ ಎಂದು ಸಲಹೆ ನೀಡಿದರು.

ಆಶೀರ್ವಚನ ನೀಡಿದ ಶಿರೂರು ಮಠದ ಬಸವಲಿಂಗ ಮಹಾ ಸ್ವಾಮೀಜಿ, ತನು, ಮನ, ಭಾವ, ನಡೆ-ನುಡಿಗಳಲ್ಲಿ ಶುಚಿತ್ವ ಕಾಪಾಡುವವನು ನಿಜವಾದ ಜ್ಞಾನಿ. ಮಕ್ಕಳಲ್ಲಿ ಒಳ್ಳೆಯ ಹವ್ಯಾಸ ಬೆಳೆಯಬೇಕು. ನಮ್ಮಲ್ಲಿರುವ ಒಡವೆಯೆಂದರೆ ಜ್ಞಾನ ರತ್ನ. ಮಾನವೀಯತೆಯೇ ದೇವರು. ಇತರರಿಗೆ ಒಳಿತನ್ನು ಬಯಸಿ ಅವರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವುದೇ ನಿಜವಾದ ಮನುಷ್ಯತ್ವ. ನಮ್ಮ ಮನಸ್ಸನ್ನು ಚಂಚಲಗೊಳಿಸದೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ. ಪಿ. ಕೃಷ್ಣ ಮಾತನಾಡಿ, ಮದ್ಯ ಮಾರಾಟದಿಂದ ದೇಶ ಹಾಗೂ ರಾಜ್ಯಕ್ಕೆ ಕೋಟ್ಯಂತರ ರೂ.ಗಳ ಆದಾಯ ಬರುತ್ತದೆ. ಜನರನ್ನು ಅದರಲ್ಲೂ ಯುವಜನರನ್ನು ವ್ಯಸನಮುಕ್ತಗೊಳಿಸುವುದು ನಮ್ಮೆಲ್ಲರ ಗುರಿಯಾಗಬೇಕು. ದಿನದಲ್ಲಿ ಒಂದು ಗಂಟೆ ಇತರರ ಒಳಿತಿಗೆ ಶ್ರಮಿಸಿದರೆ ನಮಗೆ ನೆಮ್ಮದಿ ಆತ್ಮತೃಪ್ತಿ ಸಿಗುತ್ತದೆ ಎಂದರು.

ಗಾಂಧೀಜಿ ಅಖಂಡ ಭಾರತ ಪ್ರವಾಸ ಮಾಡಿ ಬಡತನ, ವ್ಯಸನವನ್ನು ಮುಕ್ತವಾಗಿಸಲು ಹೋರಾಟ ನಡೆಸಿದ್ದರು. ಅದರಲ್ಲಿಯೂ ಗ್ರಾಮೀಣ ಜನರು ಮದ್ಯಪಾನಕ್ಕೆ ದಾಸರಾಗಿ ತಮ್ಮ ಹಾಗೂ ಕುಟುಂಬದವರ ಜೀವನವನ್ನು ಹಾಳು ಮಾಡುತ್ತಿರುವುದರ ವಿರುದ್ಧ ದನಿ ಎತ್ತಿದರು ಎಂದರು.

ಇದೇ ವೇಳೆ ಡಾ. ಸಿ.ಎನ್. ಚಂದ್ರಶೇಖರ್ ರಚಿತ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಹೇಗೆ ಪರಿಹಾರ ಹೇಗೆ’ ಎಂಬ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಮನೋವೈದ್ಯಕೀಯ ತಜ್ಞ ಡಾ. ಗುರುಪ್ರಸಾದ್, ಗಾಂಧಿಸ್ಮಾರಕ ನಿಧಿ ನಿರ್ದೇಶಕ ಡಾ. ಶಿವರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಸ್.ಎನ್. ಮಹೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net