

ಮಳವಳ್ಳಿ: ಪಟ್ಟಣದ ಮದ್ಯವರ್ಜನ ಕೇಂದ್ರದಲ್ಲಿ ಭಾನುವಾರ ವ್ಯಸನಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಲೂಕಿನ ತಳಗವಾದಿ ಗ್ರಾಮದ ಸತೀಶ(32) ಮೃತರು. ಮದ್ಯ ವ್ಯಸನ ಚಟಕ್ಕೆ ದಾಸನಾಗಿದ್ದ ಇವರು ಕುಟುಂಬದವರು ಭಾನುವಾರ ಪಟ್ಟಣದಲ್ಲಿರುವ ಮದ್ಯ ವ್ಯಸನಿಗಳ ಪರಿವರ್ತನ ಕೇಂದ್ರಕ್ಕೆ ಕರೆತಂದು ಸೇರಿಸಿದ್ದರು. ಸಂಜೆಯ ವೇಳೆಗೆ ಕೇಂದ್ರದ ಶೌಚಗೃಹದಲ್ಲಿ ತಾವು ತೊಟ್ಟಿದ್ದ ಲುಂಗಿಯಿಂದ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕೇಂದ್ರದ ಮುಖ್ಯಸ್ಥರು ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಧಾವಿಸಿದ ಮೃತನ ಪಾಲಕರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದರು.
ಆದರೆ ಸೋಮವಾರ ಅಂತ್ಯಕ್ರಿಯೆಗೆಸಿದ್ಧತೆ ನಡೆಸುವಾಗ ಮೃತದೇಹದ ಮೇಲೆ ಹಲ್ಲೆಯಾಗಿರುವ ಗುರುತುಗಳು ಪತ್ತೆಯಾಗಿವೆ. ಇದರಿಂದ ಸಂಶಯಗೊಂಡ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿ ಮದ್ಯವರ್ಜನ ಕೇಂದ್ರದವರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿ ಮೃತರ ಚಿಕ್ಕಪ್ಪ ಚಿಕ್ಕಹನುಮಂತಯ್ಯ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಇನ್‌ಸ್ಪೆೆಕ್ಟರ್ ರವಿಕುಮಾರ್ ಸ್ಥಳ ಮಹಜರು ನಡೆಸಿದ ನಂತರ ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.