

ಮೈಸೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಿಧಾನ ಪರಿಷತ್ ಸದಸ್ಯರಾಗಬೇಕು ಎಂಬ ಹಂಬಲ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಸಾಂಸ್ಕೃತಿಕ ಲೋಕದ ವಾತಾವರಣವಿರುವ ರಂಗಾಯಣವನ್ನು ಒಂದು ಧರ್ಮದ ವಿರುದ್ಧ ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ವಿಚಾರಧಾರೆಗಳನ್ನು ಬಿತ್ತುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಎಲ್‌ಸಿ ಆಗುವ ಭರದಲ್ಲಿ ನೀವು ನಡೆದುಕೊಳ್ಳುತ್ತಿರುವ ರೀತಿಯನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಸಾಂಸ್ಕೃತಿಕ ತಾಣವನ್ನು ಧರ್ಮದ ಪ್ರಚಾರಕ್ಕೆ ಬಳಸುತ್ತಿರುವುದು ಬೇಸರದ ಸಂಗತಿ. ಅಡ್ಡಂಡ ಸಿ.ಕಾರ್ಯಪ್ಪ ಮೊದಲು ಕಾರ್ಯಪ್ಪ ಹೆಸರನ್ನು ಬದಲಾಯಿಸಿ ಕೊಳ್ಳಬೇಕು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ದೇಶದ ಮಹಾದಂಡನಾಯಕರಾಗಿದ್ದರು. ಅಂತಹ ಮೇರು ವ್ಯಕ್ತಿಯ ಹೆಸರನ್ನು ಇವರು ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಹೆಸರು ಬದಲಾಯಿಸಿಕೊಳ್ಳುವುದು ಸೂಕ್ತ. ಅಡ್ಡಂಡ ಕಾರ್ಯಪ್ಪ ಅಡ್ನಾಡಿಯಾಗಿದ್ದಾರೆ. ಪರಿಷತ್ ಸದಸ್ಯರಾಗಲು ವಾಮಮಾರ್ಗ ಅನುಸರಿಸಬೇಡಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ನಿರ್ದೇಶಕ ಸ್ಥಾನದಿಂದ ಅಡ್ಡಂಡ ಸಿ. ಕಾರ್ಯಪ್ಪರನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.