ಸ್ವಚ್ಛ ಭಾರತ್ ಮಿಷನ್-2ಗೆ ನೂತನ ಪಪಂಗೆ ಸೇರಿಸಿ: ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚನೆ

22
Published on

ಮೈಸೂರು: ಸ್ವಚ್ಛ ಭಾರತ್ ಮಿಷನ್-2 ಯೋಜನೆ ಅಡಿ ನೂತನ ಪಟ್ಟಣ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲದರ್ಶಿನಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ, ನಗರಸಭೆ ಮೇಲ್ದರ್ಜೇಗೇರಿಸಿದ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿಯಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸಮಸ್ಯೆ, ಸ್ವಚ್ಛತಾ ಕಾರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೊರತೆ ಎದುರಿಸಲಾಗುತ್ತಿದೆ. ಆದ್ದರಿಂದ ಸ್ವಚ್ಛ ಭಾರತ್ ಮಿಷನ್-2 ಯೋಜನೆ ಅಡಿ ಸೇರ್ಪಡೆ ಮಾಡುವಂತೆ ನಿರ್ದೇಶನ ನೀಡಿದರು.
ಸಾರ್ವಜನಿಕರಿಂದ ಸಂಗ್ರಹವಾಗುತ್ತಿರುವ ತೆರಿಗೆಯಿಂದ ನಿರ್ವಹಣೆ ಮಾಡಲಾಗಿದೆ. ಆದರೆ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಇದೆ. ಯುಜಿಡಿ ಸಮಸ್ಯೆ ನಿವಾರಣೆಗೆ ಸರ್ಕಾರದ ಅನುದಾನ ಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸಿಫ್ ಮಾತನಾಡಿ, ಸ್ವಚ್ಛಭಾರತ್ ಮಿಷನ್ ಯೋಜನೆ-2ಗೆ ಹೂಟಗಳ್ಳಿ ನಗರಸಭೆ ಸೇರಿದೆ. ಉಳಿದ ನಾಲ್ಕು ಪಟ್ಟಣ ಪಂಚಾಯಿತಿಗಳನ್ನು ಸೇರಿಸಿದರೆ ಯುಜಿಡಿ ಸಂಪರ್ಕ ಕಲ್ಪಿಸಲು ಅನುದಾನ ದೊರೆಯಲಿದೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ನಂಜನಗೂಡು, ಹುಣಸೂರು ಕೂಡ ಎಸ್‌ಬಿಎಂಗೆ ಸೇರಿದೆ. ಇವುಗಳನ್ನು ಸೇರಿಸಲು ಪ್ರಸ್ತಾಪ ಸಲ್ಲಿಸಬೇಕಿದೆ ಎಂದರು.
ಮುಡಾದಿಂದ ಅನುಮೋದನೆಗೊಂಡು ರಚನೆ ಮಾಡಿರುವ 31 ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಇದೆ. ಆದ್ದರಿಂದ 3 ವರ್ಷದ ಸಂಗ್ರಹವಾಗಿರುವ ತೆರಿಗೆ ಹಣವನ್ನು ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ಮುಡಾದಿಂದ ಹಣ ಬಿಡುಗಡೆ ಮಾಡದಿದ್ದರೆ ಕಷ್ಟವಾಗಲಿದೆ ಎಂದು ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್ ಶಾಸಕರ ಗಮನಕ್ಕೆ ತಂದರು.
ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ 31 ಬಡಾವಣೆಗಳಿದ್ದು, 9164 ನಿವೇಶನಗಳಿದ್ದು, ಅದರಲ್ಲಿ 4500 ಮನೆಗಳ ನಿರ್ಮಾಣವಾಗಿದೆ. ಕುಡಿಯುವ ನೀರು, ವಿದ್ಯುತ್ ದೀಪ, ಯುಜಿಡಿ, ರಸ್ತೆಗಳನ್ನು ಮಾಡಬೇಕಿದೆ. ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆ ಇದೆ. ಸದ್ಯಕ್ಕೆ 10 ಕೋಟಿ ರೂ.ಕೊಡಿಸಿದರೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಮುಡಾದವರು ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವ ಮುನ್ನ ಮೂಲ ಸೌಕರ್ಯದ ಬಗ್ಗೆ ಗಮನಹರಿಸಲಿಲ್ಲ. ಜನರು ಈಗ ಮನೆ ಕಟ್ಟಿಕೊಂಡಿದ್ದಾರೆ. ಯುಜಿಡಿ ಸಮಸ್ಯೆ ಹೇಳುತ್ತಿದ್ದಾರೆ. ಈಗ ಕನಿಷ್ಠ ಹಣ ಕೊಡುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೂಟಗಳ್ಳಿ ನಗರಸಭೆ ಎಇಇ ಅಶ್ವಿನಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net