

ಅಂಕೋಲಾ: ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತಾಗಬೇಕು. ಹಲವು ವರ್ಷಗಳಿಂದ ಅಧ್ಯಯನಗಳು ನಡೆದಿದ್ದು, ಸಂಬಂಧಿಸಿದವರಿಗೆ ಜಿಲ್ಲಾ ಹಾಲಕ್ಕಿ ಒಕ್ಕಲಿಗ ಸಂಘದವರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ರಾಘವೇಶ್ವರ ಶ್ರೀಗಳು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಹಾಲಕ್ಕಿ ಒಕ್ಕಲಿಗ ಜನಾಂಗ ಈ ಮೊದಲೇ ಪರಿಶಿಷ್ಟ ಪಂಗಡಕ್ಕೆ ಸೇರಬೇಕಿತ್ತು. ಆದರೆ, ಪ್ರಯತ್ನಗಳು ನಡೆದರೂ ಕಾರ್ಯ ಮಾತ್ರ ಸಫಲವಾಗಲಿಲ್ಲ. ತಾವು ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿದ್ದು, ಕೇಂದ್ರದಲ್ಲಿ ಈ ಪ್ರಸ್ತಾವನೆಯನ್ನು ಅತ್ಯಂತ ಮುತುವರ್ಜಿ ವಹಿಸಿ ಕಾರ್ಯ ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಪ್ರಸ್ತಾವನೆಯನ್ನು ಕೇಂದ್ರದ ಗಮನಕ್ಕೆ ತರುತ್ತೇನೆ. ಸಂಬಂಧಿಸಿದವರ ಜತೆ ಚರ್ಚಿಸುತ್ತೇನೆ. ಈ ಹಿಂದೆಯೂ ಹಾಲಕ್ಕಿ ಜಿಲ್ಲಾ ಸಂಘದ ಅಧ್ಯಕ್ಷ ಹನುಮಂತ ಗೌಡ ನೀಡಿದ ಪ್ರಸ್ತಾವನೆ ವಿಷಯವಾಗಿ ಪರಿಶೀಲನೆ ನಡೆ ಯುತ್ತಿದೆ ಎಂದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ, ಪ್ರಮುಖರಾದ ಎಸ್.ಟಿ. ಗೌಡ ಅಘನಾಶಿನಿ, ಪರಮೇಶ್ವರ ಗೌಡ ಹೊನ್ನಾವರ, ಶಂಕರ ಗೌಡ ಹೆಗ್ರೆ, ಸಣ್ಣು ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ಗೌಡ, ಗೋಕರ್ಣ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ನಾಗೇಶ ಗೌಡ, ರಮೇಶ ಗೌಡ ಮಾದನಗೇರಿ, ಮಾದೇವ ಗೌಡ ಬೆಳಂಬರ, ಮಂಕಾಳಿ ಗೌಡ ಕೊಡ್ಸಣಿ, ಲಕ್ಷ್ಮೀ ಗೌಡ, ಶ್ಯಾಮಲಾ ಗೌಡ ಉಪಸ್ಥಿತರಿದ್ದರು.
ನಮ್ಮ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿಸಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ಎಲ್ಲ ಹಿನ್ನೆಲೆಯಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ. ಆದರೆ, ಇದುವರೆಗೆ ನಮಗೆ ನ್ಯಾಯ ದೊರಕಿಲ್ಲ. ಇನ್ನಾದರೂ ಪರಿಶಿಷ್ಟ ಪಂಗಡಕ್ಕೆ ಸೇರುವಂತಾಗಬೇಕು.ಹನುಮಂತ ಗೌಡ>ಜಿಲ್ಲಾಧ್ಯಕ್ಷ ಹಾಲಕ್ಕಿ ಒಕ್ಕಲಿಗರ ಸಂಘ ಅಂಕೋಲಾ