ಆರು ರಾಜ್ಯಗಳ ಈಡಿಗರನ್ನು ಎಸ್ಟಿಗೆ ಸೇರಿಸಿ

DSC_0363-02
Published on

ಚಿತ್ರದುರ್ಗ: ಆಂಧ್ರ, ಕೇರಳ, ತೆಲಂಗಾಣ, ಗೋವಾ, ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿ ಈಡಿಗರ ಜನಸಂಖ್ಯೆ ಹೆಚ್ಚಾಗಿದ್ದು, ಮೂಲತಃ ಅಡವಿ ಸಮುದಾಯವಾಗಿದೆ. ಇದನ್ನು ಪರಿಶೀಲಿಸಿ, ಎಸ್ಟಿಗೆ ಸೇರ್ಪಡೆಗೊಳಿಸಲು ಆಯಾ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸಿದ್ದು, ಸಮುದಾಯದವರ ಪ್ರಗತಿಗಾಗಿ 500 ಕೋಟಿ ಇಲ್ಲವೇ, 250 ಕೋಟಿ ರೂ. ಕೂಡಲೇ ಬಿಡುಗಡೆಗೊಳಿಸಬೇಕು. ರಾಜಧಾನಿ ಬೆಂಗಳೂರಿನಲ್ಲಿ ಅವರ ಹೆಸರಲ್ಲಿ ಪುತ್ಥಳಿ ನಿರ್ಮಿಸಬೇಕು. ಹೆಂಡದ ಮಾರಯ್ಯ ಜಯಂತಿ ಸರ್ಕಾರದಿಂದ ಆಚರಿಸಬೇಕು. ಈ ಬೇಡಿಕೆಗಳನ್ನು ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಘೋಷಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಈಡಿಗರ ಮಹಾಮಂಡಲ ದೇಶಾದ್ಯಂತ ಸಂಘಟಿತವಾಗುತ್ತಿದೆ. ಈಡಿಗ, ಬಿಲ್ಲವ, ನಾಮಧಾರಿ ಹೆಸರುಗಳಿಂದ ಕರೆಯಲ್ಪಡುವ ಸಮುದಾಯದ ಜನಸಂಖ್ಯೆ ರಾಜ್ಯದಲ್ಲಿ 70 ಲಕ್ಷದಷ್ಟಿದೆ. ಏಳು ಮಂದಿ ಶಾಸಕರು, ಇಬ್ಬರು ಸಚಿವರಿದ್ದಾರೆ. ಆದರೂ ಸಮುದಾಯಕ್ಕೆ ಹೇಳಿಕೊಳ್ಳುವಂತ ಕೊಡುಗೆ ಸರ್ಕಾರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾರಾಯಿ (ಸೇಂದಿ) ಬಂದ್ ಮಾಡಲಾಯಿತು. ಪರ್ಯಾಯ ವ್ಯವಸ್ಥೆ ಕಲ್ಪಿಸಲಿಲ್ಲ. ಇದರಿಂದ ಸಮುದಾಯ ಇನ್ನಷ್ಟು ಆರ್ಥಿಕವಾಗಿ ಕುಸಿಯಿತು. ಇದನ್ನೇ ನಂಬಿ ಬದುಕು ಕಟ್ಟಿಕೊಂಡವರು ತೊಂದರೆಗೆ ಸಿಲುಕಿದರು. ಈಡಿಗರು ರಾಜಕೀಯವಾಗಿ ಬೆಳೆಯಬಾರದೆಂಬ

ದುರುದ್ದೇಶದಿಂದ ದಕ್ಷಿಣ ಭಾರತದ ಆರು ರಾಜ್ಯದಲ್ಲಿ ಸೇಂದಿ ಮಾರಾಟ ನಿಷೇಧಿಸಲಾಗಿದೆ. ಆದರೆ, ಸಿಗರೇಟು, ಮದ್ಯ, ಗುಟ್ಕಾ ಏಕೆ ಬಂದ್ ಮಾಡಿಲ್ಲ ಎಂದು ಪ್ರಶ್ನಿಸಿದರು.

ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಜೇಗೌಡ್ರು, ವಕೀಲ ಜಗದೀಶ್ ಗುಂಡೇರಿ, ಮುಖಂಡರಾದ ಸಿದ್ದೇಶ್, ಲೋಹಿತ್, ಶ್ರೀನಿವಾಸ್, ಅರೇನಹಳ್ಳಿ ತಿಪ್ಪೇಸ್ವಾಮಿ, ಪ್ರಸನ್ನಕುಮಾರ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net