ಅಧಿಕಾರ ವಹಿಸಿಕೊಳ್ಳದ ಎಡಿಸಿ ಕಾರಣವೇನು..?

Sajid-mulla.
Published on

ಕಾರವಾರ: ಜಿಲ್ಲೆಗೆ ವರ್ಗಾವಣೆಯಾಗಿ ಬಂದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹುದ್ದೆಗೆ ಹಾಜರಾಗದೇ ಇರುವ ಕಾರಣ ಕಾರವಾರ ಎಸಿ ಕನಿಷ್ಕ ಅವರಿಗೆ ಅಪರ ಜಿಲ್ಲಾಧಿಕಾರಿ ಪ್ರಭಾರ ವಹಿಸಲಾಗಿದೆ.
ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರನ್ನು ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ಅಕ್ಟೋಬರ್ 1 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ ಕೆ.ಎಚ್. ಆದೇಶ ಹೊರಡಿಸಿದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಸಾಜಿದ್ ಅಹಮದ್ ಮುಲ್ಲಾ ಅವರನ್ನು ಪ್ರಕಾಶ ಅವರ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಅ.15 ರವರೆಗೂ ಸಾಜಿದ್ ಅವರು ಹುದ್ದೆಗೆ ಬಂದು ಅಽಕಾರ ವಹಿಸಿಕೊಂಡಿಲ್ಲ. ಎಡಿಸಿ ಹುದ್ದೆ ಖಾಲಿ ಇರುವ ಕನಿಷ್ಕ ಅವರಿಗೆ ಪ್ರಭಾರ ವಹಿಸಲಾಗಿದೆ.
ಪ್ರಕಾಶ ರಜಪೂತ ಅವರು ಅಧಿಕಾರ ವಹಿಸಿಕೊಂಡು 1 ವರ್ಷ ಕಳೆಯುವ ಮೊದಲೇ ವರ್ಗಾವಣೆಯಾಗಿದ್ದರು. ಈಗ ಸಾಜಿದ್ ಮುಲ್ಲಾ ಹಾಜರಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆ ಹುದ್ದೆಯಲ್ಲಿ ಏನು ವಿಶೇಷವಿದೆ ಎಂಬ ಅನುಮಾನ ಮೂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ನಡುವಿನ ಮುಸುಕಿನ ಗುದ್ದಾಟ ಎಡಿಸಿ ವರ್ಗಾವಣೆ ವಿಚಾರದಲ್ಲೂ ಆಗಿದೆ ಎಂಬ ಗುಸುಗುಸು ಜಿಲ್ಲಾಧಿಕಾರಿ ಕಚೇರಿಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಈ ಸಂಬಂಧ ಸ್ಪಷ್ಟತೆಗೆ ಸಾಜಿದ್‌ ಅವರನ್ನು ವಿಜಯವಾಣಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net