

ಮೈಸೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ಅಪರ ಜಿಲ್ಲಾಧಿಕಾರಿ ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಡಾ.ಪಿ. ಶಿವರಾಜು ಶನಿವಾರ ಶಾಂತಿನಗರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಹಾಜರಿದ್ದ ರೋಗಿಗಳೊಂದಿಗೆ ಹಾಗೂ ಅವರ ಸಂಬಂಧಿಕರೊಂದಿಗೆ ಆಸ್ಪತ್ರೆಯ ಸೇವೆಯ ಬಗ್ಗೆ ಚರ್ಚೆ ನಡೆಸಿದರು. ಎರಡು ದಿನಗಳ ಹಿಂದೆ ಕಂಡುಬಂದಿದ್ದ ಕಾಲರಾ ಬಗ್ಗೆ ಹಾಗೂ ಕುಡಿಯುವ ನೀರಿನ ಕಾರಣದಿಂದ ಉಂಟಾಗಿದ್ದ ವಾಂತಿ-ಭೇದಿ ಪ್ರಕರಣಗಳ ಬಗ್ಗೆ ಇಂದು ಪರಿಶೀಲನೆ ನಡೆಸಿ ಹಾಜರಿದ್ದ ವೈದ್ಯರಿಂದ ವಿವರಣೆಯನ್ನು ಪಡೆದು ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ವೈದ್ಯಕೀಯ ತಪಾಸಣೆ ನಡೆಸಿ ಅವರ ಆರೋಗ್ಯ ಸುಧಾರಿಸುವಲ್ಲಿ ಕ್ರಮ ವಹಿಸಬೇಕು. ಶುದ್ಧಕುಡಿಯುವ ನೀರಿನ ಬಗ್ಗೆ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನಗರ ಪಾಲಿಕೆಯ ಅಧಿಕಾರಿಗಳನ್ನು ಕೂಡಲೇ ಭೇಟಿಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು. ಈ ಸಂದರ್ಭ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ವೆಂಕಟೇಶ್ ಇದ್ದರು.