ಅವಧಿಯೊಳಗೆ ಅರ್ಜಿ ವಿಲೇವಾರಿಗೆ ಎಡಿಸಿ ಸಾವಿತ್ರಿ ಕಡಿ ಸೂಚನೆ

adc savitri kadi meeting rti training to officers koppal
ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ತರಬೇತಿ ಕಾರ್ಯಕ್ರಮವನ್ನು ಎಡಿಸಿ ಸಾವಿತ್ರಿ ಕಡಿ ಉದ್ಘಾಟಿಸಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಸಂಪನ್ಮೂಲ ವ್ಯಕ್ತಿ ಅಶೋಕ ಹಲಗಲಿ ಇದ್ದರು.
Published on

ಕೊಪ್ಪಳ: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸೂಕ್ತ ಮಾಹಿತಿಯೊಂದಿಗೆ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಎಡಿಸಿ ಸಾವಿತ್ರಿ ಕಡಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಆರ್‌ಟಿಐ, ಜಿಎಸ್‌ಟಿ, ಟಿಡಿಎಸ್ ಲೆಕ್ಕ ಸಮನ್ವಯದ ಕುರಿತು ಜಿಲ್ಲಾಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಾಹತಿ ಹಕ್ಕಿನಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಗತ್ಯ ಮಾಹಿತಿಯೊಂದಿಗೆ ನಿಗದಿತ ಅವಧಿಯಲ್ಲಿ ವಿಲೇಗೊಳಿಸಿ. ಮಾಹಿತಿ ಇಲ್ಲದಿದ್ದಲ್ಲಿ ಸೂಕ್ತ ಕಾರಣದೊಂದಿಗೆ ಉತ್ತರಿಸಿ. ಸಕಾರಣವಿಲ್ಲದೇ ಅರ್ಜಿ ತಿರಸ್ಕರಿಸಬೇಡಿ.

ತಪ್ಪು ಮಾಹಿತಿ ನೀಡಬೇಡಿ. ಕೊನೇ ದಿನದವರೆಗೆ ಕಾಯಬೇಡಿ. ಅರ್ಜಿ ಬಂದ ದಿನವೇ ಮಾಹಿತಿ ನೀಡಲು ಯತ್ನಿಸಿ. ಅರ್ಜಿದಾರರನ್ನು ಸತಾಯಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಅಶೋಕ ಹಲಗಲಿ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಅರಿವಿರಬೇಕು. ಯಾವ ಅರ್ಜಿ, ಮಾಹಿತಿ ಎಷ್ಟು ದಿನದಲ್ಲಿ ನೀಡಬೇಕೆಂದು ತಿಳಿಯಬೇಕು. ಅರ್ಜಿದಾರರೊಂದಿಗೆ ಅನಗತ್ಯ ವಾದ, ಗೊಂದಲ ಮಾಡಿಕೊಳ್ಳಬೇಡಿ. ಬರವಣಿಗೆ ಮೂಲಕವೇ ಉತ್ತರಿಸಿ.

ಮುಕ್ತಾಯಗೊಂಡ, ಚಾಲ್ತಿ ಅರ್ಜಿಗಳ ವಿವರಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ. ನಿಮ್ಮ ವ್ಯಾಪ್ತಿಗೆ ಬಾರದ ಅರ್ಜಿಯನ್ನು ಸಂಬಂಧಿಸಿದವರಿಗೆ ವರ್ಗಾಯಿಸಿ. ಮೇಲ್ಮನವಿಗೆ ಅವಕಾಶವಿಲ್ಲದಂತೆ ನಿಮ್ಮ ಹಂತದಲ್ಲೇ ಮಾಹಿತಿ ಒದಗಿಸಿ. ಅಸರ್ಮಪಕ ಮಾಹಿತಿ ನೀಡಬೇಡಿ ಎಂದರು.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಬಸವರಾಜ ಮಾತನಾಡಿ, ಜಿಎಸ್‌ಟಿ, ಟಿಡಿಎಸ್, ಠೇವಣಿ ಲೆಕ್ಕ ಸಮನ್ವಯ, ಜಿಎಸ್‌ಟಿ ಚಲನ್ ಸೃಜನೆ, ಠೇವಣಿ ಹೊಂದಾಣಿಕೆ, ಬಿಲ್ ತಯಾರಿಕೆ ಹಾಗೂ ಜಿಎಸ್‌ಟಿಆರ್-7 ಫೈಲ್ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಷಯ ನಿರ್ವಾಹಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net