

ಮಂಡ್ಯ: ನಗರದ ಹೊರವಲಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಿರಲಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಸಿ.ಶಿವಾನಂದಮೂರ್ತಿ ಮನವಿ ಮಾಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಪಿಡಿಒಗಳಿಗೆ ವಹಿಸಲಾಗುತ್ತದೆ. ಜತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕರೆತರಬೇಕು ಎಂದರು.
ಸಾರ್ವಜನಿಕರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೆ 1 ಬಸ್ ನಿಯೋಜಿಸಲಾಗಿದೆ. ಬಸ್ ವ್ಯವಸ್ಥೆಯ ಜವಾಬ್ದಾರಿ ಸಂಪೂರ್ಣವಾಗಿ ಕೆಎಸ್‌ಆರ್‌ಟಿಸಿ ವಿಭಾಗದವರಾಗಿರುತ್ತದೆ. ಪ್ರತಿ ಬಸ್‌ನಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಕ್ಯಾನ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಗ್ಲೂಕೋಸ್, ಒಆರ್‌ಎಸ್ ಫೌಡರ್, ಚಾಕೋಲೇಟ್, ಬಿಸ್ಕೆಟ್ ವ್ಯವಸ್ಥೆಯನ್ನು ಆಯಾ ಪಿಡಿಒಗಳು ಕಲ್ಪಿಸಬೇಕು. ಸಮ್ಮೇಳನದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ತಿಂಡಿ ಹಾಗೂ ಊಟದ ವ್ಯವಸ್ಥೆ ಇದ್ದು, ಎಲ್ಲರೂ ಆಹಾರವನ್ನು ಸೇವಿಸಬೇಕು ಎಂದು ಸೂಚಿಸಿದರು.
ಶಾಲಾ ಮಕ್ಕಳನ್ನು ಸಮ್ಮೇಳನಕ್ಕೆ ಕರೆದುಕೊಂಡು ಬರುವ ಹಾಗೂ ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಎಲ್ಲರೂ ಇಂದಿನಿಂದಲೇ ಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸಿ. ಜಿಲ್ಲೆಯಲ್ಲಿರುವ ಇಒ, ಬಿಇಒ, ಸಿಡಿಪಿಒ, ಟಿಎಚ್‌ಒ ಹಾಗೂ ತಹಸೀಲ್ದಾರ್ ಅವರನ್ನೊಳಗೊಡಂತೆ ಸಭೆ ನಡೆಸಿ ಯೋಜನೆ ರೂಪಿಸಿಕೊಂಡು ಸಹಕಾರ ಮನೋಭಾವದಿಂದ ಕೆಲಸ ಮಾಡಿ. ಜಿಲ್ಲೆಯು ಬಹಳ ಅಚ್ಚುಕಟ್ಟಾಗಿ ಸಮ್ಮೇಳನವನ್ನು ನಡೆಸಿದೆ ಎಂಬ ಕೀರ್ತಿ ಎಲ್ಲೆಡೆ ಪಸರಿಸುವಂತೆ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕಾರಣಿಭೂತರಾಗೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನವು ಬಹಳ ಅಪರೂಪದ ಕಾರ್ಯಕ್ರಮ. ಸರ್ಕಾರ, ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲೆಯವರೆಲ್ಲ ಒಟ್ಟಿಗೆ ಸೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಪ್ರತಿಯೊಬ್ಬರು ಬಹಳ ಉತ್ಸಾಹದಿಂದ ಭಾಗವಹಿಸಬೇಕು. ಸಮ್ಮೇಳನದ ಅಂಗವಾಗಿ ಶಾಲಾ ಹಾಗೂ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕನ್ನಡಕ್ಕಾಗಿ ಓಟ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಮ್ಯಾರಥಾನ್ ಓಟದಲ್ಲಿ ಎಲ್ಲರೂ ಭಾಗವಹಿಸಿ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸವಿಯುವಂತಾಗಲಿ ಎಂದರು.
ಕೆಎಸ್‌ಆರ್‌ಟಿಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪಣ್ಣೆದೊಡ್ಡಿ ಹರ್ಷ, ಡಾ.ಕೃಷ್ಣೇಗೌಡ ಹುಸ್ಕೂರು, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.