

ಮಂಡ್ಯ: ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯೂ ರಾಜ್ಯಾದ್ಯಂತ ಸಂಚರಿಸಲಿದೆ. ಅದರಂತೆ ರಾಮನಗರ ಜಿಲ್ಲೆಯಿಂದ ಆ.18ರಂದು ಬೆಳಗ್ಗೆ 9ಗಂಟೆಗೆ ಮಂಡ್ಯ ಜಿಲ್ಲೆಗೆ ಆಗಮಿಸಲಿದೆ. ಅಂದು ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸೋಣ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1973ರಲ್ಲಿ ಮೈಸೂರು ಪ್ರಾಂತ್ಯಕ್ಕೆ ಹೊಸದಾಗಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು. ಈ ಹಿನ್ನೆಲೆ ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಕಳೆದಿದೆ. ಅದರ ಸುವರ್ಣ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಸಂಬಂಧ ಜ್ಯೋತಿ ರಥ ಯಾತ್ರೆಯು ಆ.18 ರಿಂದ 25 ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಜ್ಯೋತಿ ರಥಯಾತ್ರೆಯು ಆ.18ರಂದು ಮದ್ದೂರು, 19ರಂದು ನಾಗಮಂಗಲ, 20ರಂದು ಕೆ.ಆರ್.ಪೇಟೆ, 21ರಂದು ಪಾಂಡವಪುರ, 22ರಂದು ಶ್ರೀರಂಗಪಟ್ಟಣ, 23ರಂದು ಮಂಡ್ಯ, 24ರಂದು ಮಳವಳ್ಳಿ ತಾಲೂಕಿನಲ್ಲಿ ಸಂಚಾರಿಸಲಿದೆ. ಆ.25ರಂದು ಚಾಮರಾಜನಗರ ಜಿಲ್ಲೆ ತಲುಪಲಿದೆ. ಸ್ಥಳೀಯ ಆಡಳಿತಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಪಿಡಿಒ, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಬಂಧಪಟ್ಟವರ ಸಭೆ ನಡೆಸಿ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಜ್ಯೋತಿ ರಥಯಾತ್ರೆಯನ್ನು ಬರಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥ ಯಾತ್ರೆ ಸಂಚರಿಸುವ ಮಾರ್ಗದಲ್ಲಿ ಬರುವ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿಗಳು ಹಬ್ಬದ ರೀತಿ ಮಾರ್ಗವನ್ನು ಶೃಂಗರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಸರ್ಕಾರ ನಿಗದಿಪಡಿಸಿರುವ ರೂಟ್‌ಮ್ಯಾಪ್‌ನಲ್ಲಿಯೇ ಸಂಚರಿಸಬೇಕು. ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಜಿಲ್ಲೆಯ ಪುರಸಭೆ, ಶಾಲಾ ಕಾಲೇಜು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜ್ಯೋತಿ ರಥಯಾತ್ರೆಯ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳಬೇಕು. ರಥವು ಸಂಚಾರಿಸುವ ಸ್ಥಳದಲ್ಲೆಲ್ಲ ಕನ್ನಡ ಘೋಷಣೆ, ಡೊಳ್ಳು ಕುಣಿತ ಮೆರವಣಿಗೆ, ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನದೊಂದಿಗೆ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕಿ ಡಾ.ರೋಹಿಣಿ, ತಹಸೀಲ್ದಾರ್ ಗ್ರೇಡ್-2 ವಸಂತಕುಮಾರ್, ಮುಖಂಡರಾದ ಸುಜಾತಾ ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಆನಂದ್, ಅರುಣಕುಮಾರಿ, ನಾಗರಾಜು ಇತರರಿದ್ದರು.