

ಮಂಡ್ಯ: ಜಿಲ್ಲೆಯ ಅಂಧ ಮಕ್ಕಳಿಗೆ ಮೈಸೂರಿನ ತಿಲಕ್ ನಗರದಲ್ಲಿರುವ ಅಂಧ ಮಕ್ಕಳ ಪ್ರವೇಶ ಶಾಲೆಯಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶೇ.40ಕ್ಕಿಂತ ಹೆಚ್ಚು ದೃಷ್ಟಿದೋಷವುಳ್ಳ ಮಕ್ಕಳನ್ನು ಅಂಧ ಮಕ್ಕಳ ಪಾಠಶಾಲೆಗೆ ದಾಖಲಿಸುವ ಹಾಗೂ ನೇತ್ರ ತಜ್ಞರಿಂದ ತಪಾಸಣಾ ಶಿಬಿರ ಆಯೋಜಿಸುವ ಸಂಬಂಧ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರಿನ ಶಾಲೆಯಲ್ಲಿ ವಸತಿ, ಊಟ, ಆರೋಗ್ಯ ತಪಾಸಣೆ, ಕೌಶಲಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿವೆ. ಇವುಗಳನ್ನು ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿರುವ ದೃಷ್ಟಿ ದೋಷವುಳ್ಳ ಮಕ್ಕಳನ್ನು ಮೈಸೂರಿನಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಗೆ ದಾಖಲಿಸಲು ದೃಷ್ಟಿ ದೋಷವುಳ್ಳ ಮಕ್ಕಳ ಪಾಲಕರನ್ನು ಭೇಟಿ ಮಾಡಿಸಿ. ಅಲ್ಲಿ ಸಿಗುವ ಸೌಲಭ್ಯ ಸವಲತ್ತುಗಳ ಬಗ್ಗೆ ತಿಳಿಸಿ ಪಾಲಕರ ಮನವೊಲಿಸಿ. ಜಿಲ್ಲೆಯಲ್ಲಿ 6 ರಿಂದ 16 ವರ್ಷದೊಳಗಿನ ಒಟ್ಟು 89 ಜನ ದೃಷ್ಠಿ ದೋಷವುಳ್ಳ ಮಕ್ಕಳಿದ್ದಾರೆ. ಅದರಲ್ಲಿ 83 ಜನ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉಳಿದ 6 ಜನ ಮಕ್ಕಳು ಯಾವುದೇ ಶಾಲೆಯಲ್ಲಿ ವ್ಯಾಸಂಗ ಮಾಡದೆ ಮನೆಯಲ್ಲಿಯೇ ಉಳಿದುಕೊಂಡಿರುತ್ತಾರೆ. ಅವರ ಪಾಲಕರನ್ನು ಮೈಸೂರಿನ ಅಂಧ ಮಕ್ಕಳ ಶಾಲೆಗೆ ದಾಖಲಿಸಲು ತಿಳಿಸಿ ಎಂದರು.
ಜಿಲ್ಲೆಯಲ್ಲಿ ಒಟ್ಟು 2,966 ಜನ ವಿಕಲತೆವುಳ್ಳ ಅಂಧ ವಿಕಲಚೇತನರಿದ್ದಾರೆ. ಮಂಡ್ಯ ತಾಲೂಕಿನಲ್ಲಿ 744, ಮದ್ದೂರಿನಲ್ಲಿ 420, ಮಳವಳ್ಳಿಯಲ್ಲಿ 528, ಶ್ರೀರಂಗಪಟ್ಟಣದಲ್ಲಿ 206, ಪಾಂಡವಪುರದಲ್ಲಿ 294, ನಾಗಮಂಗಲದಲ್ಲಿ 348, ಕೆ.ಆರ್.ಪೇಟೆ ತಾಲೂಕಿನಲ್ಲಿ 426 ಅಂಧ ವಿಕಲಚೇತನರಿದ್ದಾರೆ. ಮೈಸೂರಿನ ಶಾಲೆಯಲ್ಲಿ ಈಗಾಗಲೇ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಕೆಲ ಅಂಧ ಮಕ್ಕಳ ಪಾಲಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಅಂತವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಜಿಲ್ಲೆಯಲ್ಲಿರುವ ಒಟ್ಟು 89 ಮಕ್ಕಳು ಅಲ್ಲಿ ಶಿಕ್ಷಣ ಪಡೆಯುವಂತೆ ತಿಳಿಸಿ. ಎಲ್ಲ ಅಂಧ ಮಕ್ಕಳ ಪಾಲಕರು ಮೈಸೂರಿನ ಅಂಧ ಮಕ್ಕಳ ಶಾಲೆಗೆ ಒಮ್ಮೆ ಭೇಟಿ ನೀಡಿದಾಗ ಅಲ್ಲಿ ಸಿಗುವ ಸೌಲಭ್ಯಗಳ ಅರಿವಾಗುತ್ತದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮೋಹನ್‌ಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಕೋಮಲ್ಕುಮಾರ್, ಮಿಮ್ಸ್ ಅಧೀಕ್ಷಕರು ಡಾ.ಶಿವಕುಮಾರ್ ಇತರರಿದ್ದರು.