ಜಯಂತಿ ಆಚರಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಎಡಿಸಿ ಡಾ.ಎಚ್.ಎಲ್.ನಾಗರಾಜು ಮನವಿ

Adc Meeting mandya
Published on

ಮಂಡ್ಯ: ಜಿಲ್ಲಾಡಳಿತದಿಂದ ಆಚರಿಸಲಾಗುವ ಮಹಾನ್ ವ್ಯಕ್ತಿಗಳ ಜಯಂತಿ ಒಂದು ಜನಾಂಗ, ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಆಚರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಜಯಂತಿಗಳ ಆಚರಣೆಯ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ 32 ಸಂಘ ಸಂಸ್ಥೆಗಳ ಹೆಸರನ್ನು ಗುರುತಿಸಿ ಇನ್ನೂ ಮುಂದೆ ಜಿಲ್ಲಾಡಳಿತದ ವತಿಯಿಂದ ನಡೆಯಲಾಗುವ ಜಯಂತಿ ಹಾಗೂ ಅದರ ಪೂರ್ವಭಾವಿ ಸಿದ್ಧತಾ ಸಭೆಗಳಿಗೆ ಆಹ್ವಾನ ನೀಡಲಾಗುತ್ತಿದೆ. ಎಲ್ಲ ಸಂಘಟನೆಗಳು ಒಟ್ಟಿಗೆ ಸೇರಿ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸಿ, ಮಹಾನ್ ವ್ಯಕ್ತಿಗಳು ನೀಡಿದ ಸಂದೇಶವನ್ನು ಎಲ್ಲರಿಗೂ ನೀಡೋಣ ಎಂದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದುರಸ್ತಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜ.19ರಂದು ಮಹಾಯೋಗಿ ವೇಮನ ಜಯಂತಿ, 23ರಂದು ಅಂಬಿಗರ ಚೌಡಯ್ಯ ಜಯಂತಿ ಹಾಗೂ ಫೆ.29ರಂದು ಸಿದ್ದರಾಮೇಶ್ವರ ಜಯಂತಿಯನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಚರಣೆ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net