

ಮಂಡ್ಯ: ಜಿಲ್ಲೆಯನ್ನು ದಡಾರ ಮತ್ತು ರುಬೆಲ್ಲಾ ಕಾಯಿಲೆಯಿಂದ ಮುಕ್ತಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ 2023ರ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದರೆ ದೇಶವನ್ನು ದಡಾರ ಮತ್ತು ರುಬೆಲ್ಲಾದಿಂದ ಮುಕ್ತ ಮಾಡಬಹುದು ಎಂದರು.
ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಕಾಯಿಲೆಯನ್ನು 14 ಪ್ರಕರಣಗಳಲ್ಲಿ ಪತ್ತೆ ಮಾಡಲಾಗಿದೆ. ಈ ಕಾಯಿಲೆಯು ಹೆಚ್ಚಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಮಕ್ಕಳ ಮುಖ, ಹೊಟ್ಟೆಯ ಮೇಲೆ ಹಾಗೂ ತೆಳುವಾದ ಜಾಗದಲ್ಲಿ ಗುಳ್ಳೆಗಳ ಜತೆಗೆ ಜ್ವರದ ಲಕ್ಷಣ ಕಂಡುಬರುತ್ತದೆ. ಆ ವೇಳೆ ಹತ್ತಿರದ ವೈದ್ಯರ ಸಲಹೆ ಪಡೆದುಕೊಳ್ಳುವುದರ ಜತೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ಜತೆಗೆ ಸರ್ಕಾರದಿಂದಲೇ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು. ಈ ಸಂಬಂಧ ಅಧಿಕಾರಿಗಳು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಶೇ.56ರಷ್ಟು ರಕ್ತವಷ್ಟೇ ಲಭ್ಯ: ಜಿಲ್ಲೆಯ ರಕ್ತ ನಿಧಿಯಲ್ಲಿ ಶೇ.56ರಷ್ಟು ರಕ್ತ ಮಾತ್ರ ಚಿಕಿತ್ಸೆಯ ಸಂದರ್ಭದಲ್ಲಿ ಸಿಗುತ್ತಿದೆ. ಇನ್ನೂ ಉಳಿದ ರಕ್ತವನ್ನು ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರಕ್ತದ ನಿಧಿಯಲ್ಲಿ ರಕ್ತದ ಕೊರೆತೆಯನ್ನು ತಪ್ಪಿಸಲು ಜಿಲ್ಲೆಯ ಏಳು ತಾಲೂಕಿನಲ್ಲಿ ಜೂ.7 ರಿಂದ 14 ರವರೆಗೆ ರಕ್ತದಾನಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಮೂರು ರಕ್ತನಿಧಿ ಕೇಂದ್ರಗಳಲ್ಲಿ ಸುರಕ್ಷಿತವಾಗಿ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ಅವಶ್ಯಕತೆ ಇರುವ ರೋಗಿಗೆ ರಕ್ತವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಮಾಡಬೇಕು. ಆದ್ದರಿಂದ ನಮ್ಮ ಜಿಲ್ಲೆಯ ದಾನಿಗಳು ರಕ್ತದಾನ ಮಾಡಬೇಕು. ಜೂ.14 ರಂದು ನಡೆಯುವ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಆರೋಗ್ಯ ಇಲಾಖೆ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಸುರಕ್ಷಿತ ರಕ್ತ ದಾನಿಗಳ ಮೂಲಕ ರಕ್ತವನ್ನು ಸಂಗ್ರಹಿಸಿಕೊಳ್ಳಲು ಶಿಬಿರಗಳನ್ನು ಆಯೋಜಿಸಲಾಗುವುದು. ವಿವಿಧ ಸಂದರ್ಭದಲ್ಲಿ ರಕ್ತದ ಕೊರತೆಯಾದಾಗ ಅದನ್ನು ನೀಗಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ನಿವೃತ್ತ ಆರೋಗ್ಯಾಧಿಕಾರಿ ಟಿ.ಎನ್.ಮರೀಗೌಡ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ಮಾನಸಿಕ ರೋಗ ತಜ್ಞ ಡಾ.ಕೆ.ಪಿ ಅಶ್ವಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್. ಶಶಿಧರ್, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಜಿಲ್ಲಾ ಮೇಲ್ವಿಚಾರಕ ವಿನಯ್ ಹಾಜರಿದ್ದರು.