

ಮಂಡ್ಯ: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಎಪಿಎಲ್ ಪಡಿತರದಾರರ ಉಚಿತ ಚಿಕಿತ್ಸೆಗೆ ಅನುಕೂಲವಾಗುವ ಪ್ರಧಾನಮಂತ್ರಿ ಆಯುಷ್ಮಾನ್ ಕಾರ್ಡ್‌ಗೆ ಫೆ.28ರೊಳಗೆ ಹೆಚ್ಚಿನ ಜನರು ನೋಂದಣಿ ಮಾಡಿಕೊಳ್ಳುವಂತೆ ಕ್ರಮ ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 4,65,000 ಜನರು ಕಾರ್ಡ್‌ಗಾಗಿ ನೋಂದಣಿ ಮಾಡಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 14 ರಿಂದ 15 ಸ್ಥಾನದಲ್ಲಿದ್ದೇವೆ. ಉಚಿತ ಆರೋಗ್ಯ ಸೇವೆ ಒದಗಿಸುವ ಕಾರ್ಡ್‌ಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.
ಆರೋಗ್ಯ ಸಮಸ್ಯೆ ಯಾವ ಸಮಯದಲ್ಲಿ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಯುಷ್ಮಾನ್ ಕಾರ್ಡ್ ಪಡೆದ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ 1.5 ಲಕ್ಷ ರೂ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದ್ದರಿಂದ ಗ್ರಾಮ ಒನ್ ಫ್ರಾಂಚೈಸಿಗಳು ಫೆ.28ರೊಳಗಾಗಿ ಜಿಲ್ಲೆಯಲ್ಲಿ ಹೆಚ್ಚು ನೋಂದಣಿ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಶಾಲಾ, ಕಾಲೇಜು, ವಸತಿ ಶಾಲೆಗಳು, ಹಾಸ್ಟೆಲ್, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಕೆಲಸ ನಿರ್ವಹಿಸಬೇಕು. ಇನ್ನು ತಹಸೀಲ್ದಾರ್ ಹಾಗೂ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಸಿದ್ಧಪಡಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಾಹಿತಿ ನೀಡಲಿದ್ದಾರೆ. ಅದರಂತೆ ಆಧಾರ್ ಕಾರ್ಡ್ ನಕಲು ಪ್ರತಿ ಕೊಟ್ಟು ಹಾಗೂ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮಾಹಿತಿ ನೀಡಿದರೇ ಸ್ಥಳದಲ್ಲೇ ನೋಂದಣಿ ಮಾಡಿಕೊಡಲಾಗುವುದು ಎಂದು ವಿವರಿಸಿದರು.
ಮಾ.11ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕಾರ್ಡ್ ನೋಂದಣಿ ಹಾಗೂ ಗ್ರಾಮ ಒನ್ ಕಾರ್ಯನಿರ್ವಹಣೆ ಎರಡು ಯೋಜನೆಗಳು ಉತ್ತಮ ಸ್ಥಾನದಲ್ಲಿರಬೇಕು. ಪಡಿತರ ವಿತರಣಾ ಕೇಂದ್ರ ಮಾಲೀಕರೊಂದಿಗೆ ಚರ್ಚಿಸಿ ಗ್ರಾಮ ಒನ್ ಸಿಬ್ಬಂದಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಪಡಿತರ ಆಹಾರ ಧಾನ್ಯ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕರ ನೋಂದಣಿ ಮಾಡಬಹುದು. ಗ್ರಾಮ ಒನ್ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು. ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ರಾಜ್ಯ ಮಟ್ಟದಲ್ಲಿ ಬಹುಮಾನ ಸಹ ನೀಡಲಾಗುತ್ತಿದೆ. ಆದ್ದರಿಂದ ಪ್ರತಿ ಮಾಹೆ ಮಂಡ್ಯ ಜಿಲ್ಲೆಗೆ ಬಹುಮಾನ ದೊರೆಯುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು ಶೇ.15ರಷ್ಟು ಜನ ಮಧುಮೇಹ ಅಥವಾ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್, ಹೃದಯ ಸಂಬಂಧಿ ಹಾಗೂ ಇನ್ನಿತರೆ ಕಾಯಿಲೆಗಳ ಚಿಕಿತ್ಸೆ ದುಬಾರಿಯಾಗಬಹುದು. ಆದ್ದರಿಂದ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡರೆ 1650 ರೋಗಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಇನ್ನು ನೋಂದಣಿ ಮಾಡಿಸಿಕೊಂಡರೆ ಪ್ರತ್ಯೇಕ ಐಡಿ ಬರಲಿದೆ. ಇದರಿಂದ ದೇಶಾದ್ಯಂತ ಸುಲಭವಾಗಿ ಚಿಕಿತ್ಸೆ ತೆಗೆದುಕೊಳ್ಳಲು ಅನುಕೂಲ. ಮಾತ್ರವಲ್ಲದೆ ಹೆಚ್ಚಿನ ಚಿಕಿತ್ಸೆಗೆ ಆನ್‌ಲೈನ್ ಮೂಲಕ ರೋಗಿಯ ಮಾಹಿತಿ ಪಡೆದುಕೊಂಡು ಹಿಂದಿನ ಚಿಕಿತ್ಸೆಗ ದತ್ತಾಂಶವೂ ಸಿಗಲಿದೆ. ಒಮ್ಮೆ ನೋಂದಣಿ ಮಾಡಿಸಿಕೊಂಡರೆ ಪ್ರತಿ ವರ್ಷ ನವೀಕರಣ ಆಗಲಿದೆ. ಸಾರ್ವಜನಿಕರು ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ, ಡಿಡಿಪಿಐ ಜವರೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್ ಇತರರಿದ್ದರು.