ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ವಿತರಣೆ: ಎಡಿಸಿ ಡಾ.ಎಚ್.ಎಲ್.ನಾಗರಾಜು ಮಾಹಿತಿ

01_01_Mdy_02(Dc Meeting)
Published on

ಮಂಡ್ಯ: ರಾಜ್ಯಸರ್ಕಾರದಿಂದ ಜಿಲ್ಲೆಯಲ್ಲಿ 400 ಜನ ಕಟ್ಟಡ ಕಾರ್ಮಿಕ ಮಕ್ಕಳಿಗೆ ಶ್ರಮಿಕ್ ಟ್ಯಾಬ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದರು.

ಸಮಿತಿಯ ತೀರ್ಮಾನದಂತೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 9 ಮತ್ತು 10 ನೇ ತರಗತಿಯ ಅರ್ಹ ಕಾರ್ಮಿಕ ಮಕ್ಕಳಿಗೆ ಜ.4ರಂದು ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಟ್ಯಾಬ್‌ಗಳನ್ನ ವಿತರಣೆ ಮಾಡಲಾಗುವುದು. ಕಾರ್ಮಿಕರ ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡಬೇಕು. ಹೊಸ ತಂತ್ರಜ್ಞಾನದ ಮೂಲಕ ಓದಿಕೊಳ್ಳಬೇಕು. 9 ಮತ್ತು 10 ತರಗತಿಯ ಭಾಷಾ ವಿಷಯ ಬಿಟ್ಟು ಉಳಿದ ಐಚ್ಛಿಕ ವಿಷಯಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಲಿಯಬಹುದು. ಜತೆಗೆ ಆಡಿಯೋ ಮತ್ತು ವಿಡಿಯೋ ರೂಪದಲ್ಲಿಯು ವಿಷಯಗಳನ್ನು ನೀಡಲಾಗಿದೆ. ಇದರಿಂದ ಮಕ್ಕಳು ಅವರು ಇರುವ ಜಾಗದಲ್ಲಿಯೇ ಅಭ್ಯಾಸ ಮಾಡಬಹುದು. ಇದು ಬಹಳ ಪರಿಣಾಮಕಾರಿ ಹಾಗೂ ಆಕರ್ಶಕವಾಗಿಯು ಇದೆ ಎಂದು ಹೇಳಿದರು.

ವಿಡಿಯೋ ಮೂಲಕ ಕೆಲವೊಂದು ವಿಷಯಗಳನ್ನು ನಾನು ನೋಡಿದ್ದೇನೆ. ಇದರಿಂದ ಮಕ್ಕಳಿಗೆ ಪಾಠ ಕೇಳಿರುವುದಕ್ಕಿಂತಲು ವಿಶೇಷವಾದ ಅನುಭವವಾಗುದು. ತಕ್ಷಣ ಅವರಿಗೆ ನೆನಪಾಗುವುದು. ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಮನನ ಮಾಡಿಕೊಳ್ಳಲು ಅನುಕೂಲವಾಗುದು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಸಹಾಯಕ ಕಾರ್ಯದರ್ಶಿ ಸುಬ್ರಹ್ಮಣ್ಯಶರ್ಮ, ಕಾರ್ಮಿಕ ಅಧಿಕಾರಿ ಎಸ್.ಎಂ.ಮಂಜುಳಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಶಾಖಾಧಿಕಾರಿ ರಾಜೇಗೌಡ, ತಾಲೂಕು ನಿರೀಕ್ಷಕರಾದ ಸ್ವಾಮಿ, ನಾಗರತ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net