

ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೆ.17ರಂದು ಯೋಗಾಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 7ಗಂಟೆಯಿಂದ 7.45 ರವರೆಗೆ ನಡೆಯಲಿದೆ. ಸ್ವಚ್ಛತೆ, ಶೌಚಗೃಹ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆ ಆಗದ ರೀತಿ ವ್ಯವಸ್ಥೆಗಳನ್ನು ಕೈಗೊಳ್ಳಲು ಕ್ರಮವಹಿಸಿ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಮಾತನಾಡಿ, ಯೋಗಥಾನ್ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಜನರು ಭಾಗವಹಿಸಬೇಕೆಂದು ಸರ್ಕಾರದಿಂದ ನಿರ್ದೇಶನ ನೀಡಿದೆ. ಈಗಾಗಲೇ ಯೋಗಥಾನ್- 2022 ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಲು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಂಘ ಸಂಸ್ಥೆಗಳು ಹಾಗೂ ಸ್ವಇಚ್ಛೆ ಇಂದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೇರಿದಂತೆ ಪ್ರಸ್ತುತದಲ್ಲಿ 17,450 ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಸೆ.17ರಂದು ಗಿನ್ನೀಸ್ ರೆಕಾರ್ಡ್‌ನಲ್ಲಿ ದಾಖಲೆ ಆಗುತ್ತದೆ. ಕಾರ್ಯಕ್ರಮಕ್ಕೆ ನೋಂದಣಿಯಾದ ನಂತರ ಕ್ಯೂ ಆರ್ ಕೋಡ್ ನೀಡಲಾಗಿರುತ್ತದೆ. ಯೋಗಥಾನ್ ದಿನದಂದು ಕ್ರೀಡಾಂಗಣದ ಮೂರು ಕಡೆ ಪ್ರವೇಶ ದ್ವಾರದಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾಮ್ ಮಾಡಿದ ನಂತರ ಪ್ರವೇಶ ನೀಡಲಾಗುವುದು. ಭಾಗವಹಿಸಿದ ನಂತರ ಆ್ಯಪ್‌ನಲ್ಲಿ ಪ್ರಮಾಣ ಪತ್ರ ಸಹ ಲಭ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ, ಜಿಪಂ ಉಪ ಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ರಂಗೇಗೌಡ ಇತರರಿದ್ದರು.