

ಮಂಡ್ಯ: ಜಿಲ್ಲೆಯ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸಿಕೊಳ್ಳಬೇಕು. ಅಂತೆಯೇ ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ತಾಪಂ ಇಒ ಹಂತದಲ್ಲಿ ಸಭೆ ಆಯೋಜಿಸಿ ವರದಿ ಸಲ್ಲಿಸಬೇಕು. ಡಿಡಿಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಆಧಾರ್ ಜೋಡಣೆಯ ಬಗ್ಗೆ ಆಂದೋಲನ ನಡೆಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಬರುವಂತಹ ಪಡಿತರ ಚೀಟಿದಾರರು, ಮಹಿಳಾ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹಾಗೂ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಗರುಡಾ ಆ್ಯಪ್, ವಾಟರ್ ಹೆಲ್ಪ್ಲೈನ್ ಆ್ಯಪ್‌ಗಳ ಬಗ್ಗೆ ಮಾಹಿತಿ ನೀಡಿ ಮೊಬೈಲ್ನಲ್ಲಿ ಸುಲಭವಾಗಿ ಜೋಡಣೆ ಕೆಲಸ ಮಾಡಬಹುದು. ಅಥವಾ ಬಿಎಲ್ಒ ಗಳಿಗೆ ಆಧಾರ್‌ಸಂಖ್ಯೆ ಜೋಡಣೆಗೆ ಒಪ್ಪಿಗೆ ಪತ್ರ ನೀಡಿದರೆ ಅವರು ಮಾಡಿಕೊಡುತ್ತಾರೆ ಎಂದರು.
ಸಭೆಯಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ನಾಗರಾಜ್ ಜಿ.ಚೊಳ್ಳಿ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ತಹಸೀಲ್ದಾರ್ ಕುಂಇ ಅಹಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾಧಿಕಾರಿ ಕಚೇರಿ ಹಿರಿಯ ಸಹಾಯಕ ಸ್ವಾಮಿಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.