ಡಿ.7ರಂದು ದುದ್ದದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

18_11_Mdy_02(ADc Meeting)
Published on

ಮಂಡ್ಯ: ಮಂಡ್ಯ ತಾಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.7ರಂದು ತಾಲೂಕಿನ ದುದ್ದ ಗ್ರಾಮದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ. ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಮಂಡ್ಯ ತಾಲೂಕು ಮಟ್ಟದ ಕಾರ್ಯಕ್ರಮವನ್ನು ದುದ್ದ ಕೇಂದ್ರ ಸ್ಥಾನದಲ್ಲಿ ಮಾಡಲಾಗುವುದು. ನಾಲ್ಕರಿಂದ ಐದು ಸಾವಿರ ಕನ್ನಡ ಅಭಿಮಾನಿಗಳನ್ನು, ಕನ್ನಡ ಭಾಷೆ, ಸಾಹಿತ್ಯ ಆಸಕ್ತರನ್ನು, ಜಾನಪದ ಕಲೆ, ಸಂಸ್ಕೃತಿಯಲ್ಲಿ ದುಡಿದಿರುವವರನ್ನು ಸೇರಿಸಿ ಅದ್ದೂರಿಯಾಗಿ ಆಚರಿಸಬೇಕು. ಶಾಲಾ ಮಕ್ಕಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸುತ್ತಮುತ್ತಲಿನ ಗ್ರಾಮಸ್ಥರು, ಸ್ತ್ರೀ ಶಕ್ತಿ ಸಂಘದವರು, ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಘದ ಮಹಿಳೆಯರು, ಎಲ್ಲ ಸಂಘಟನೆಯ ಮುಖಂಡರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದ ರೀತಿ ವಹಿಸಿರುವ ಕೆಲಸಗಳ ನಿರ್ವಹಣೆ ಮಾಡಬೇಕು. ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಕೈಜೋಡಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಕುಂಞ ಅಹಮದ್, ಡಿಡಿಪಿಐ ಜವರೇಗೌಡ, ಡಿಸಿ ಕಚೇರಿ ಸಹಾಯಕ ಅಧಿಕಾರಿ ಸ್ವಾಮಿಗೌಡ, ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ತಾಲೂಕು ಅಧ್ಯಕ್ಷ ಮಂಜು ಮುತ್ತೆಗೆರೆ, ನಗರ ಘಟಕದ ಮಹಿಳಾಧ್ಯಕ್ಷೆ ಸುಜಾತಾ ಕೃಷ್ಣ, ಸದಸ್ಯರಾದ ರತ್ನಮ್ಮ, ಭವಾನಿ, ಅಂಜನಾ ಶ್ರೀಕಾಂತ್, ಮಂಜುನಾಥ್, ನಾಗರಾಜು, ಚಂದ್ರಲಿಂಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net