

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಮಾನವ ಸರಪಳಿ ರಚಿಸುತ್ತಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಬೃಹತ್ ಮಾನವ ಸರಪಳಿ ರಚಿಸಲಾಗುವುದು. ಮಾನವ ಸರಪಳಿ ಹಾದು ಹೋಗುವ ಗ್ರಾಪಂ, ನಗರ ಪ್ರದೇಶದ ಶಾಲೆಗಳ 6 ರಿಂದ 10ನೇ ತರಗತಿ, ಪಿಯುಸಿ, ಪದವಿ ವಿದ್ಯಾರ್ಥಿಗಳು, ಗ್ರಾಪಂ, ನಗರ, ಸ್ಥಳಿಯ ಸಂಸ್ಥೆ ಪ್ರತಿನಿಧಿಗಳು, ಗ್ರಾಪಂ ಮಹಿಳಾ ಒಕ್ಕೂಟದ ಪ್ರತಿನಿಧಿಗಳು, ನರೇಗಾ ಕೂಲಿಕಾರರು, ಗೃಹ ಲಕ್ಷಿ$್ಮ ಯೋಜನೆ ಲಾನುಭವಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಕೈಗಾರಿಕೆಗಳಲ್ಲಿನ ಕಾರ್ಮಿಕರು ಭಾಗಿಯಾಗುವಂತೆ ನೋಡಿಕೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಂದು ಬೆಳಗ್ಗೆ 9 ಗಂಟೆಗೆ ಕೊಪ್ಪಳದ ಅಶೋಕ ವೃತ್ತದಲ್ಲಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರು, ವಿಪ ಸದಸ್ಯರು ಸೇರಿ ಇತರ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಕುರಿತು ಗ್ರಾಪಂ, ನಗರ, ಪಟ್ಟಣ ಪ್ರದೇಶಗಳಲ್ಲಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಿ. ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಿ. ಸಾರ್ವಜನಿಕರಿಗೆ ಅಲ್ಪ ಉಪಾಹಾರ, ಕುಡಿವ ನೀರು ಸೌಲಭ್ಯ ಕಲ್ಪಿಸಿ. ಮಾನವ ಸರಪಳಿ ಇರುವೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ. ಎಲ್ಲ ಇಲಾಖೆಯವರು ಸಮನ್ವಯತೆಯಿಂದ ಕೆಲಸ ಮಾಡಿ ಯಶಸ್ವಿಗೊಳಿಸುವಂತೆ ತಾಕೀತು ಮಾಡಿದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಸೆ.15ರಂದು ಬೆಳಗ್ಗೆ 8.30 ಗಂಟೆಯಿಂದ ಬೆಳಗಟ್ಟಿ ರಾಜ್ಯ ಹೆದ್ದಾರಿಯಿಂದ ಆರಂಭವಾಗಿ ಮುನಿರಾಬಾದ್ ಡ್ಯಾಂವರೆಗೆ 53 ಕಿ.ಮೀ.ವರೆಗೆ ಮಾನವ ಸರಪಳಿ ರಚಿಸಲಾಗುವುದು. ಪ್ರತಿ ಕಿ.ಮೀ. ಮಾನವ ಸರಪಳಿಗೆ ಒಂದು ಸಾವಿರ ಜನ ಅವಶ್ಯವಿದೆ. ಒಟ್ಟು 53 ಸಾವಿರ ಜನರು ಬೇಜಾಗಲಿದ್ದಾರೆ. ಮಾನವ ಸರಪಳಿ ಹಾದುಹೋಗುವ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೆ ಒಂದರಂತೆ ವಾಹನ ವ್ಯವಸ್ಥೆ ಮಾಡಲಾಗುವುದು. ಪ್ರತಿ 100 ಮೀಟರ್ಗೆ ಒಬ್ಬ ನೋಡಲ್ ಅಧಿಕಾರಿ, 1 ಕಿ.ಮೀ.ಗೆ ಒಬ್ಬ ತಾಲೂಕು, 3 ಕಿ.ಮೀ.ಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಇರಲಿದ್ದಾರೆ. ಪ್ರತಿ 5 ಕಿ.ಮೀ.ಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದೆಂದರು.
ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ್ ಜಿ.ಎಚ್. ಇತರರಿದ್ದರು.