

ಚಿಕ್ಕಮಗಳೂರು: ಕೊಳಗಾಮೆ, ಜಾಗರ, ಮೇಲಿನಹುಲುವತ್ತಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಡಾ. ಕೆ.ಕುಮಾರ್, ಜಿಪಂ ಸದಸ್ಯೆ ಜಸಂತಾ ಅನಿಲ್ಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕೊಳಗಾಮೆ, ಕಾರಂಜಿ, ಉಕ್ಕುಡ, ಭುವನಹಳ್ಳಿ, ಮಲಗಾರ್, ಕೆಳಕುಂತಿ, ಮೇಲ್ಕುಂತಿ, ದೊಡ್ಡಿನ ಕೊಳಗ, ಕಾಲೇನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ 2800 ಜನಕ್ಕಿಂತಲೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಈ ಹಿಂದೆ ಖಾಸಗಿ ಬಸ್ಸೊಂದು ಕೊಳಗಾಮೆ ಗ್ರಾಮದಿಂದ ಬೆಳಗ್ಗೆ 7.30ಕ್ಕೆ ಹೊರಟು 9.30ಕ್ಕೆ ನಗರ ತಲುಪುತ್ತಿತ್ತು. ಸಂಜೆ 5.30ಕ್ಕೆ ನಗರದಿಂದ ಹೊರಟು 7.30ಕ್ಕೆ ಕೊಳಗಾಮೆ ತಲುಪುತ್ತಿತ್ತು. ಲಾಕ್ಡೌನ್ ನಂತರ 9.30ಕ್ಕೆ ಕೊಳಗಾಮೆಯಿಂದ ಹೊರಡುತ್ತಿದ್ದು ನಗರದಿಂದ ಮಧ್ಯಾಹ್ನ 2.30ಕ್ಕೆ ಕೊಳಗಾಮೆಗೆ ಹೊರಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು, ಗ್ರಾಮಸ್ಥರು ಕೋರ್ಟು ಕಚೇರಿ ಹಾಗೂ ಇನ್ನಿತರೆ ಕೆಲಸಕ್ಕೆ ನಗರಕ್ಕೆ ತೆರಳಲು ತೊಂದರೆಯಾಗುತ್ತಿದೆ. ಹಾಗಾಗಿ ಕೆಎಸ್ಆರ್ಟಿಸಿ ಬಸ್ ಆರಂಭಿಸಿ ಹಿಂದಿನ ಸಮಯದಂತೆ ಸಂಚಾರ ಮುಂದುವರಿಸಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.