

ಕನಕಗಿರಿ: ಕಳೆದ ಕೆಲ ದಿನಗಳಿಂದ ಅಡವಿಬಾವಿ ಗ್ರಾಮದ ಬಳಿಯ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಮೂರು ಚಿರತೆಗಳ ಪೈಕಿ ಒಂದು ಮಾತ್ರ ಬೆಟ್ಟದ ಕೆಳಗಿನ ದ್ರಾಕ್ಷಿ ತೋಟದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ಬೆಳಗಿನ ಜಾವ ಬಿದ್ದಿದೆ.
ಸೋಮಸಾಗರದಿಂದ ಅಡವಿಬಾವಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿನ ಗುಡ್ಡದ ಬಳಿ ಇತ್ತೀಚೆಗೆ ಮೂರು ಚಿರತೆ ಕಾಣಿಸಿಕೊಂಡಿದ್ದವು. ಹಲವು ದಿನಗಳ ಕಾಲ ನಾಯಿ, ಕುರಿಗಳನ್ನು ಬೇಟೆಯಾಡುತ್ತ, ಬೋನಿನ ಸುತ್ತಲೂ ಅಡ್ಡಾಡಿದ್ದರೂ ಬಿದ್ದಿರಲಿಲ್ಲ. ಆದರೆ, ಶನಿವಾರ ಎರಡೂವರೆ ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ತೋಟದ ಮಾಲೀಕ ಯಮನೂರಪ್ಪ ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸೆರೆ ಸಿಕ್ಕ ಚಿರತೆಯನ್ನು ಸ್ಥಳೀಯವಾಗಿ ಬಿಡದೆ ಕಾಡಿಗೆ ಸ್ಥಳಾಂತರ ಮಾಡಬೇಕು. ಇನ್ನೂ ಹಲವು ಚಿರತೆಗಳಿದ್ದು, ಮತ್ತೆ ಇಲ್ಲಿಯೇ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗಂಗಾವತಿಯಲ್ಲಿನ ನರ್ಸರಿಗೆ ಕೊಂಡೊಯ್ದು ಆರೋಗ್ಯ ತಪಾಸಣೆಯ ನಂತರ ದಾಂಡೇಲಿಗೆ ರವಾನೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು. ಗೌರಿಪುರ ಗ್ರಾಪಂ ಪಿಡಿಒ ನಾಗಲಿಂಗ, ಅರಣ್ಯ ರಕ್ಷಕ ಶಿವರಾಜ ವಾಲಿ, ಅರಣ್ಯ ವೀಕ್ಷಕರಾದ ಈರಪ್ಪ ಹಾದಿಮನಿ, ಲಕ್ಷ್ಮಣ ಇತರರಿದ್ದರು.