ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಗೆ ಆದರ್ಶ ಆಯ್ಕೆ

20HAN-4 (SPORTS)
Published on

ಹನಗೋಡು : ಬಡ ಕುಟುಂಬದ ಪ್ರತಿಭೆಯೊಂದು ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ಮೂಡಿಸಿದೆ. ಹುಣಸೂರು ತಾಲೂಕು ಹನಗೋಡು ಹೋಬಳಿ ಅರಸುಕಲ್ಲಹಳ್ಳಿಯ ಕೆ.ಎನ್.ಆದರ್ಶ ಅವರು ಡಿ.26ರಂದು ಗುಜರಾತ್‌ನ ಸೂರತ್‌ನಲ್ಲಿ ನಡೆಯಲಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಕ್ರೀಡಾಕೂಟಕ್ಕೆ ರಾಜ್ಯದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಳೆದ ತಿಂಗಳು ಮೈಸೂರಿನ ಚಾಮುಂಡಿವಿಹಾರ ಸ್ಟೇಡಿಯಂನಲ್ಲಿ ಸೀನಿಯರ್ ನ್ಯಾಷನಲ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇವರು ಗ್ರಾಮದ ನಟರಾಜ್ ಮತ್ತು ರಾಣಿ ಅವರ ಪುತ್ರ.

ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗೆ ಕೊಡಗಿನ ಕೂಡಿಗೆ ಕ್ರೀಡಾಶಾಲೆ ವರದಾನವಾಯಿತು. ಸದ್ಯ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಆದರ್ಶ, ಈವರೆಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನೂರಾರು ಬಹುಮಾನ ಗಳಿಸಿದ ಕ್ರೀಡಾಪಟುವಾಗಿದ್ದಾರೆ. ಎಲ್ಲ ಸಾಧನೆಗೆ ಕ್ರೀಡಾ ತರಬೇತುದಾರ ಲೋಕೇಶ್ ಅವರ ಮಾರ್ಗದರ್ಶನವೇ ಕಾರಣ ಎನ್ನುತ್ತಾರೆ.

ಸಾಧನೆಗಳು: ವಿವಿಧ ಜಿಲ್ಲೆಗಳಲ್ಲಿ ನಡೆದ ರಾಜ್ಯ ಮಟ್ಟದ 7 ಸ್ಪರ್ಧೆಯಲ್ಲಿ 25 ಬಹುಮಾನ, ರಾಷ್ಟ್ರ ಮಟ್ಟದ ಜಿಮ್ನಾಸ್ಟಿಕ್ಸ್ ಕ್ರೀಡೆಯ 8 ಸ್ಪರ್ಧೆಗಳಲ್ಲಿ ಹಲವು ಫಲಕ, ಟ್ರೋಫಿ ಗಳಿಸಿದ್ದಾರೆ. 2019ರಲ್ಲಿ ಆಗ್ರಾ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 4ನೇ ಬಹುಮಾನ ಸೇರಿದಂತೆ ಈವರೆಗೆ 14 ಚಿನ್ನ, 11 ಬೆಳ್ಳಿ, ಮೂರು ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಪ್ರಾಯೋಜಕರ ಅಗತ್ಯವಿದೆ: ಬಡ ಕುಟುಂಬದ ಕ್ರೀಡಾಪಟುವಿಗೆ ಇನ್ನಷ್ಟು ಸಾಧನೆ ಮಾಡಲು ಆರ್ಥಿಕ ಸಮಸ್ಯೆ ಕಾಡುತ್ತಿದೆ. ಸಂಘ, ಸಂಸ್ಥೆಗಳು, ದಾನಿಗಳು ಹಾಗೂ ಪ್ರಾಯೋಜಕರು ಸಹಕರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net