ಜಿಲ್ಲೆಯಲ್ಲಿ ಶಿಶುಮರಣ ಪ್ರಮಾಣ ಇಳಿಮುಖ

udp-6-adarsha
Published on

ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರು ಅತ್ಯುತ್ತಮ ಸೇವೆ ನೀಡುತ್ತಿರುವುದರಿಂದ ಶಿಶುಮರಣ ಪ್ರಮಾಣ ಇಳಿಮುಖವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ವಿಶ್ವದ ಗಮನಸೆಳೆದಿದೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಭಾನುವಾರ ಆದರ್ಶ ಚಾರಿಟೇಬಲ್​ ಟ್ರಸ್ಟ್​ ಮತ್ತು ಆದರ್ಶ ಆಸ್ಪತ್ರೆ ಆಶ್ರಯದಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಬೃಹತ್​ ಉಚಿತ ವೈದ್ಯಕಿಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಮತ್ತು ವೈದ್ಯರು ಸಂಬಳ ಪಡೆದರೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಉನ್ನತಿಯಲ್ಲಿ ಈ ಎರಡೂ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಅಭಿದ್​ ಗದ್ಯಾಳ್​ ಮಾತನಾಡಿ, ಪ್ರಪಂಚದ ಅತ್ಯಂತ ಕ್ಲಿಷ್ಟ ಯಂತ್ರವೆಂದರೆ ಮಾನವ ಶರೀರ. ಇದನ್ನು ಸುಸ್ಥಿತಿಯಲ್ಲಿಡಬೇಕಾದರೆ ಅಪಾರ ಜ್ಞಾನ ಮತ್ತು ಪರಿಣತಿ ಬೇಕು. ವೈದ್ಯ ವೃತ್ತಿಯನ್ನು ಸೇವಾ ಮನೋಭಾವದಿಂದ ಮಾಡಿದರೆ ಸಮಾಜಕ್ಕೆ ಬಹಳಷ್ಟು ಉಪಯೋಗವಾಗಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದ ಹಠಾತ್​ ಹೃದಯಾಘಾತ ಸಂಭವಿಸುತ್ತಿದೆ. ಕರೋನೋತ್ತರ ಕಾಲಟ್ಟದಲ್ಲಿ ಶ್ರಮದ ಕೆಲಸಗಳು ಕಡಿಮೆಯಾಗಿದ್ದು ನಿತ್ಯ ಜೀವನದಲ್ಲಿ ನಡಿಗೆ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು ಎಂದರು.

ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಜಿ. ಎಸ್​. ಚಂದ್ರಶೇಖರ್​ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ್​ ಕುಮಾರ್​ ಸೊರಕೆ, ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಪ್ರೊ. ಎನ್​.ಆರ್​. ರಾವ್​, ಡಾ. ನಾಗರತ್ನಾ ಶಾಸ್ತ್ರಿ, ಡಾ. ರಾಮರಾವ್​, ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರಶಾಂತ್​ ಭಟ್​, ಡಾ. ಶಶಿಕಿರಣ್​ ಆಚಾರ್​, ಡಾ. ಭವಾನಿ ಶಂಕರ್​ ಅವರನ್ನು ಸನ್ಮಾನಿಸಲಾಯಿತು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net