

ಉಡುಪಿ: ಬಸವಣ್ಣನವರ ದಾಸೋಹ ಪರಿಕಲ್ಪನೆಯಲ್ಲಿ ರಕ್ತದಾನಕ್ಕೂ ಮಹತ್ವವಿದೆ. ಇದರಿಂದ ಜೀವದಾನ ಸಾಧ್ಯವಿದೆ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಎಲ್ಲೆಡೆ ರಕ್ತದಾನಿಗಳ ತಂಡವನ್ನು ರಚಿಸುವುದರಿಂದ ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ರೋಗಿಗಳ ಸಂಬಂಧಿಕರು ಅಲೆದಾಡುವುದು ತಪುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.
ಭಾನುವಾರ ಆದರ್ಶ ಆಸ್ಪತ್ರೆಯಲ್ಲಿ ಉಡುಪಿ ಬಸವ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಘಟಕ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಕಳಬೇಡ , ಕೊಲಬೇಡ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶೇ.100ರಷ್ಟು ಪಾಲನೆ ಮಾಡಿದಂತಾಗುತ್ತದೆ. ಇದರಿಂದ ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕನಸು ನನಸಾಗುತ್ತದೆ. ಸುಖಿ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಅನೇಕ ಬಾರಿ ಅಪಘಾತದಿಂದ ಗಾಯಗೊಂಡವರಿಗೆ ಕ್ಲಪ್ತ ಸಮಯದಲ್ಲಿ ರಕ್ತ ಸಿಗದೆ ಜೀವವೇ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲಾ ಅಸ್ಪತ್ರೆಗಳಲ್ಲಿ ಎಲ್ಲಾ ಗುಂಪಿನ ರಕ್ತ ಸಂಗ್ರಹದಲ್ಲಿರಬೇಕು. ಯುವ ಜನರು ರಕ್ತದಾನದ ಮಹತ್ವ ಅರಿಯಬೇಕು. ಇದರ ಬಗ್ಗೆ ಇರುವ ಮಿಥ್ಯೆ ಹೋಗಲಾಡಿಸಬೇಕು. ರಕ್ತದಾನ ಶಿಬಿರ ಏರ್ಪಡಿಸುವ ಎಲ್ಲಾ ಸಂಸಂಸ್ಥೆಗಳಿಗೆ ಜಿಲ್ಲಾಸ್ಪತ್ರೆಯಿಂದ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು. 3 ರಿಂದ 6 ತಿಂಗಳಿಗೆ ಬೇಕಾದಷ್ಟು ರಕ್ತ ಸಂಗ್ರಹದಲ್ಲಿರುವುದು ಅತೀ ಅಗತ್ಯ ಎಂದರು.
ಜಿಪಂ ಸಿಇಒ ಪ್ರಸನ್ನ ಎಚ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಜಿಲ್ಲಾ ಸರ್ಜನ್ ಡಾ.ವೀಣಾ ಕುಮಾರಿ, ಬಸವ ಸಮಿತಿ ಅಧ್ಯಕ್ಷ ಡಿ.ಜಿ. ಗಂಗಾಧರ, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಅಸ್ಪತ್ರೆ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಜಿ. ಎಸ್.ಚಂದ್ರಶೇಖರ್ ಸ್ವಾಗತಿಸಿ, ಡಾ.ಯು.ಸಿ. ನಿರಂಜನ್ ಕಾರ್ಯಕ್ರಮ ನಿರೂಪಿಸಿದರು.