ಜಿಲ್ಲೆಯಲ್ಲಿ 28 ಆದರ್ಶ ಗ್ರಾಮಗಳು!

dc office new
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರತಿ ವರ್ಷ ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯಡಿ ಪ್ರಸಕ್ತ ಸಾಲಿಗೆ ಜಿಲ್ಲೆಯ 28 ಗ್ರಾಮಗಳು ಆಯ್ಕೆಯಾಗಿವೆ. ಇವುಗಳ ಪೈಕಿ ಹೊಸಕೋಟೆಯಲ್ಲಿ ಹೆಚ್ಚು ಅಂದರೆ 11 ಗ್ರಾಮಗಳು ಆಯ್ಕೆಯಾಗಿದ್ದರೆ ಕೊನೆಯ ಸ್ಥಾನದಲ್ಲಿ ನೆಲಮಂಗಲದ 3 ಗ್ರಾಮಗಳು ಆಯ್ಕೆಯಾಗಿವೆ.

ಮೂಲಸೌಕರ್ಯ ವಂಚಿತ ಗ್ರಾಮಗಳನ್ನು ಗುರುತಿಸಿ ಅವುಗಳಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಈ ಯೋಜನೆಯಲ್ಲಿ ಉದ್ದೇಶಗಳಲ್ಲಿ ಪ್ರಮುಖವಾಗಿದೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 28 ಗ್ರಾಮಗಳನ್ನು ಆಯ್ಕೆಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 500ಕ್ಕೂ ಹೆಚ್ಚಿನ ಜನಸಂಖ್ಯೆ ಹೆಚ್ಚಿರುವ ಗ್ರಾಮ ಆಯ್ಕೆ ಮಾಡಿ, ಪ್ರತಿ ಮನೆ ಸರ್ವೆ ಜತೆಗೆ ಕುಟುಂಬದವರಿಗೆ ಯಾವ ಸೌಲಭ್ಯ ಸಿಕ್ಕಿದೆ? ಯಾವ ಸೌಲಭ್ಯದಿಂದ ವಂಚಿತರಾಗಿದ್ದಾರೆ ಯಾವ ಇಲಾಖೆಯ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುವುದು ಪ್ರಥಮ ಕಾರ್ಯವಾದರೆ ಸಿಗಬೇಕಿರುವ ಸೌಲಭ್ಯಗಳ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಸೌಲಭ್ಯ ಕಲ್ಪಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಕ್ರಿಯಾಯೋಜನೆಗೆ ಸಿದ್ದತೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖ ಎನಿಸಿರು ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುಷ್ಠಾನ ಸಮಿತಿ ಸಭೆ ನಡೆಸಿ ಅಗತ್ಯ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳ ಜಾರಿಗೆ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಆಯ್ಕೆ ಮಾಡಿರುವ 28 ಗ್ರಾಮಗಳಲ್ಲೂ ಪ್ರಮುಖವಾಗಿ ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಅಗತ್ಯವಿರುವ ಅಭಿವೃದ್ದಿ ಕೆಲಸಗಳ ಕ್ರಿಯಾ ಯೋಜನೆ ಪಟ್ಟಿ ತಯಾರಿಸಿ ಅನುಷ್ಠಾನ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಪಂ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷೆಯಲ್ಲಿ ಗ್ರಾಮ ಸಮಿತಿ ರಚನೆ ಮಾಡಲಾಗಿದೆ.

ಪ್ರತಿ ಗ್ರಾಮಕ್ಕೆ 20 ಲಕ್ಷ ರೂ.ಅನುದಾನ: ಆದರ್ಶ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳಿಗೆ 20 ಲಕ್ಷ ರೂ.ಅನುದಾನ ಒದಗಿಸಲಿದೆ. ಇದಕ್ಕೆ ಗ್ರಾಮ ಮಟ್ಟದ ಸಮಿತಿ ಕ್ರಿಯ ಯೋಜನೆ ರೂಪಿಸಿ ಅನುಮೋದನೆ ನೀಡಬೇಕು. ಈ ಸಮಿತಿಗೆ ಆಯಾ ಗ್ರಾಪಂ ಅಧ್ಯಕ್ಷರೇ ಅಧ್ಯಕ್ಷರಾಗಿದ್ದು, ಪರಿಶಿಷ್ಟಜಾತಿಯ ಎಲ್ಲ ಗ್ರಾಪಂ ಸದಸ್ಯರು ಸದಸ್ಯರಾಗಿರುತ್ತಾರೆ. ಜತೆಗೆ ಸರ್ಕಾರಿ ಆಸ್ಪತ್ರೆಯ ಎಎನ್‌ಎಂ ನೌಕರರು, ಪಿಡಿಒ, ಕಾರ್ಯದಶಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿವಿಧ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ.

ಆದರ್ಶ ಗ್ರಾಮದ ಯೋಜನೆಗಳೇನು: ಗ್ರಾಮದ ಪ್ರತಿ ಮನೆ ಸರ್ವೆ ಮಾಡಲಾಗುತ್ತದೆ. ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿವೇತನ, ಶಿಕ್ಷಣ ವಂಚಿತ ಮಕ್ಕಳ ವಿವರ ಕಲೆಹಾಕುವುದು, ಅಪೌಷ್ಟಿಕ ಗರ್ಭಿಣಿಯರು ಹಾಗೂ ಮಕ್ಕಳು, ವರ್ಷದ ಒಳಗೆ ಮೃತ ಹೊಂದಿದ ಗರ್ಭಿಣಿಯರು ಮತ್ತು ಮಕ್ಕಳ ವಿವರ, ಆರೋಗ್ಯದ ಸ್ಥಿತಿ, ಸಾಮಾಜಿಕ ಭದ್ರತೆ ಯೋಜನೆಯಡಿ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿದ್ಯುತ್ ಸಂಪರ್ಕ,ಆಧಾರ್, ಪ್ರಧಾನ ಮಂತ್ರಿ ಭೀಮಾ ಯೋಜನೆ, ಜೀವನ ಜ್ಯೋತಿ ಯೋಜನೆ, ಬ್ಯಾಂಕ್ ಸಾಲ ಪಡೆದಿರುವ ಬಗ್ಗೆ ಮಾಹಿತಿ, ಸ್ವಸಹಾಯ ಸಂಘದ ಸದಸ್ಯತ್ವ ಹೊಂದಿರುವ ಬಗೆ ಮಾಹಿತಿ, ಕೃಷಿ ಭೂಮಿ ಹೊಂದಿರುವ ಮಾಹಿತಿ ಆಧಾರಿಸಿ ಪ್ರತಿ ಮನೆಯಲ್ಲಿ ಸರ್ಕಾರಿ ಸೌಲಭ್ಯ ಪಡೆದ ಮಾಹಿತಿ ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತದೆ.

ಆಯ್ಕೆಯಾದ 28 ಗ್ರಾಮಗಳು

ನೆಲಮಂಗಲ ತಾಲೂಕಿನಲ್ಲಿ ತಾವರೆಕೆರೆ, ದಾಸೇನಹಳ್ಳಿ ಹಾಗೂ ಬ್ಯಾಡರಹಳ್ಳಿ ಗ್ರಾಮಗಳು ಆಯ್ಕೆಯಾಗಿದ್ದರೆ, ದೇವನಹಳ್ಳಿ ತಾಲೂಕಿನ ಬೀರಸಂದ್ರ, ಅಣಿಘಟ್ಟ, ಆರುವನಹಳ್ಳಿ, ಮನಗೊಅಡನಹಳ್ಳಿ, ಪಿ.ರಂಗನಾಥಪುರ ಗ್ರಾಮಗಳು ಪಟ್ಟಿಯಲ್ಲಿವೆ. ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ, ವಾಗಟ ಅಗ್ರಹಾರ, ಸಾದಪ್ಪನಹಳ್ಳಿ, ಬೀರಹಳ್ಳಿ, ತಿಂಡ್ಲು, ದೊಡ್ಡ ಅರಳಿಗೆರೆ, ಮೇಡಿಹಳ್ಳಿ, ದೇವಶೆಟ್ಟಿಹಳ್ಳಿ, ಬೆಟ್ಟಹಳ್ಳಿ, ದೊಡ್ಡದೇನಹಳ್ಳಿ, ಕಾಳಪ್ಪನಹಳ್ಳಿ ಗ್ರಾಮಗಳು ಸೇರ್ಪಡೆಯಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ, ದಡಿಘಟ್ಟಮಡುಗು, ಮೇಲಿನನಾಯ್ಕರಂಡಹಳ್ಳಿ, ಮಲ್ಲೋಹಳ್ಳಿ, ಕೆಸ್ತೂರು, ಕುಕ್ಕನಹಳ್ಳಿ, ಚೀಲೇನಹಳ್ಳಿ, ಹಳೇಕೋಟೆ, ಸಾಸಲು ಗ್ರಾಮಗಳು ಆದರ್ಶಗ್ರಾಮಗಳಾಗಲಿವೆ.

ಯಾವ ತಾಲೂಕಿಗೆ ಎಷ್ಟು ಗ್ರಾಮ

ಹೊಸಕೋಟೆ : 11

ನೆಲಮಂಗಲ : 3

ದೇವನಹಳ್ಳಿ : 5

ದೊಡ್ಡಬಳ್ಳಾಪುರ : 9

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖವಾದ ಆದರ್ಶಗ್ರಾಮ ಯೋಜನೆಯಡಿ ಜಿಲ್ಲೆಯ 28 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸಭೆಗಳನ್ನು ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಅಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ಗ್ರಾಮಗಳು ಸರ್ವಾಂಗೀಣ ಪ್ರಗತಿ ಕಾಣಲಿವೆ.

ಬಿ.ಎ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net