ಅದಮ್ಯ ರಂಗಶಾಲೆಯ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

13
Published on

ಮೊಬೈಲ್ ಸಹವಾಸ ಮತ್ತು ಹಾವಳಿಯಿಂದಾಗಿ ಮಕ್ಕಳು ಕ್ರೀಡೆಗಳಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೃಶ್ಯ ವಿಭಾಗದ ಮುಖ್ಯಸ್ಥ ಹಾಗೂ ಚಲನಚಿತ್ರ ನಿರ್ದೇಶಕ ಸಿದ್ದೇಗೌಡ ಜಿ.ಬಿ.ಸರಗೂರು ಆತಂಕ ವ್ಯಕ್ತಪಡಿಸಿದರು.

ಅದಮ್ಯ ರಂಗಶಾಲೆಯ ವತಿಯಿಂದ ನಗರದ ವಿಜಯನಗರದ ಎರಡನೇ ಹಂತದಲ್ಲಿರುವ ಎಚ್‌ಆರ್‌ಎಸ್ ಲಿಟಲ್ ಕಿಡ್ಸ್ ಕೇರ್‌ನಲ್ಲಿ ಆಯೋಜಿಸಿದರುವ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ಬಳಕೆಯಲ್ಲಿ ಮುಳುಗಿ ಹೋದ ಮೇಲೆ ಗ್ರಾಮೀಣ ಕ್ರೀಡೆಗಳು ಮಾಯವಾದವು ಎಂದು ವಿಷಾದಿಸಿದರು.

ನಾವೆಲ್ಲ ಬಾಲ್ಯದಲ್ಲಿ ಗೋಲಿ, ಬುಗರಿ, ಚಿನ್ನಿದಾಂಡು, ಲಗೋರಿ, ಕುಂಟಾಬಿಲ್ಲೆ ಆಟಗಳನ್ನು ಆಡಿ ಸಂಭ್ರಮಿಸುತ್ತಿದ್ದೆವು. ಆದರೆ ಇಂದಿನ ಮಕ್ಕಳು ಇಂತಹ ಆಟಗಳಿಂದ ದೂರ ಉಳಿದಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಮರಳಿ ಇಂತಹ ಕ್ರೀಡೆಗಳತ್ತ ಕರೆತರಬೇಕು ಎಂದು ಕರೆ ನೀಡಿದರು.

ಮೊಬೈಲ್ ಬಂದ ಮೇಲೆ ನಮ್ಮ ಪರಂಪರೆ ಅಳಿಸಿ ಹೋಗುತ್ತಿದೆ. ಮಕ್ಕಳು ಅಪ್ಪ-ಅಮ್ಮನ, ಅಣ್ಣ-ತಂಗಿಯರ ಪ್ರೀತಿಯಿಂದ ವಂಚಿತರಾಗಿದ್ದಾರೆ. ಮೊಬೈಲಿನಿಂದ ಮಕ್ಕಳ ದೂರವಿರಿಸಲು ಅಕ್ಕಪಕ್ಕದ ಮನೆಯ ಸ್ನೇಹಿತರ ಜತೆ ಆಟ ಆಡಲು ಹಚ್ಚಬೇಕು. ಜತೆಗೆ ಸಾಹಿತ್ಯಾತ್ಮಕವಾಗಿ ಮತ್ತು ಸಾಂಸ್ಕೃತಿಕವಾಗಿ ಅವರನ್ನು ತೊಡಗಿಸಿ ಅವರನ್ನು ಖುಷಿಪಡಿಸಬೇಕು ಎಂದರು.

ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳನ್ನು ಶಾಲೆಯ ಪಠ್ಯದ ಓದು ಮತ್ತು ಹೋಂವರ್ಕ್ ಒತ್ತಡದಿಂದ ದೂರ ಮಾಡುತ್ತವೆ. ಹಾಡು, ನಾಟಕ, ನೃತ್ಯ, ಬರವಣಿಗೆ, ಚಿತ್ರಕಲೆಯಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಉತ್ತಮ್ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು.

ಮಕ್ಕಳ ದೇಹ, ಬುದ್ದಿ, ಮನಸ್ಸು ವಿಕಾಸವಾಗಲು ಉತ್ತಮ ಸ್ನೇಹಿತರ ಒಡನಾಟವೂ ಬೇಕು. ಇಂತಹ ಸ್ನೇಹಿತರ ಸಂಪರ್ಕವನ್ನು ಬೇಸಿಗೆ ಶಿಬಿರಗಳು ಕಲ್ಪಿಸುತ್ತವೆ. ಇದರಿಂದ ಮಕ್ಕಳು ಪರಸ್ಪರ ಬೆರೆತು ಆಡಿ ಮತ್ತು ಹಾಡಿ ನಲಿದು ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಮಕ್ಕಳು ಕೂಡ ತಮ್ಮ ಪಾಲಕರಿಗೆ ’ನಮಗೆ ಮೊಬೈಲ್ ಬೇಡ. ಕತೆ, ಕವನ, ಹಾಡಿನ ಪುಸ್ತಕಗಳನ್ನು ಕೊಡಿಸಿ’ ಎಂದು ಕೇಳಬೇಕು. ಮನೆಯಲ್ಲಿನ ಅಜ್ಜ-ಅಜ್ಜಿಯರನ್ನು ಕತೆ ಮತ್ತು ಹಾಡು ಹೇಳಿಕೊಡುವಂತೆ ಒತ್ತಾಯಿಸಬೇಕು. ಮೊಬೈಲ್ ಮತ್ತು ಟಿವಿ ವೀಕ್ಷಣೆಗೆ ಸ್ವಲ್ಪ ಸಮಯವಷ್ಟೇ ಮೀಸಲಿಡಬೇಕು. ಹೆಚ್ಚಿನ ಸಮಯವನ್ನು ಪುಸ್ತಕಗಳ ಜೊತೆ ಕಳೆಯಬೇಕು ಎಂದು ಕಿವಿಮಾತು ಹೇಳಿದರು.

ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಉಪನ್ಯಾಸಕಿ ಸುಪ್ರಿಯ ಶಿವಣ್ಣ, ಯುವ ಕವಿ ಎನ್.ನವೀನ್‌ಕುಮಾರ್, ರಂಗ ಕಲಾವಿದ ಮನೋಜ್ ಅದಮ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net